Saturday, December 21, 2019

ಬದಲಾಗಿದ್ದು!!

ಮನೆ ತುಂಬಾ ಜನರಿದ್ದು
ಕೈಯಲ್ಲಿ ಕಾಸಿಲ್ಲದೆ
ಊಟಬಟ್ಟೆಗೆ ಪರದಾಡಿದರೂ
ಅಭದ್ರತೆಯೆಂಬುದೇ ಅರಿಯದ
ಆ ಕಾಲ!

ಕೈ ತುಂಬಿ ಸೋರುವಷ್ಟು ದುಡ್ಡು
ಖರ್ಚು ಮಾಡಲು, ದಾರಿಗಳ ಹುಡುಕುವ,
ಜನರಿಲ್ಲದ ಮನೆಯಲ್ಲಿ..
ಜನರಿದ್ದೂ ಇಲ್ಲದ ಮನೆಯಲ್ಲಿ...
ಸೋಷಿಯಲ್ ಮೀಡಿಯಾದಿ
ಪ಼ೋಟೊ, ಸ್ಟೇಟಸ್ ಹಾಕಿ 
ಸುರಕ್ಷತೆಯ ಹುಡುಕುವ
ಈ ಕಾಲ!

ಕಾಲವೇನು ಮಾಡಿತ್ತು...
ಬದಲಾದದ್ದು ನಾವು! 


ಕಪ್ಪು ಬಿಳುಪು ಚಿತ್ರ ಪಟ

ಗೂಡು ಸ್ವಚ್ಚ ಮಾಡೊ
ಕಾರ್ಯದಿ ಸಿಕ್ಕ ಆ 
ಕಪ್ಪು ಬಿಳುಪು ಚಿತ್ರ ಪಟಗಳು...
ಸಾವಿರ ವಿಷಯ 
ಸಾರುತಿದ್ದವು...

ಸಾದಾ ಸೀರೆಯಲ್ಲೂ 
ಅಮ್ಮನ ಸುಂದರ ಮುಖ
ವರ್ಷಗಳುರುಳಿದರೂ 
ಬದಲಾಗದ ಅಪ್ಪನ ಆ ಪೋಸು

ರಜೆಯಲಿ ಅಜ್ಜಿಮನೆಗೆ
ಮೊಮ್ಮಕ್ಕಳ ದಾಳಿ
ಇಳಿವಯಸ್ಸಿನ ಅಜ್ಜಿತಾತರಿಗೆ
ನಾವು ಮಾಡಿದ ಹಾವಳಿ

ಅಜ್ಜಿ ಮನೆಯ ಆ ಗಡಿಯಾರ,
ಬೀಸೋಕಲ್ಲು, ಉರಿವಲೆ
ಸಾರುತಿರುವವು ಸಾವಿರ ಕಥೆಗಳ...
ಸಂಬಂಧಗಳ ಸವಿನೆನಪುಗಳ...

ಮೊಮ್ಮಕ್ಕಳೆಲ್ಲ ಒಟ್ಟಿಗೆ ಕೂತು
ಹಾಕಿಸಿಕೊಂಡ ತುತ್ತು
ಊಟಬೇಡವೆಂದವರು
ಇದ್ದ ಅನ್ನವನ್ನೆಲ್ಲಾ ಖಾಲಿ ಮಾಡಿದ ಹೊತ್ತು!

ಆ ಮೆಂತ್ಯದ ಹಿಟ್ಟು, ತಂಗಳ ಮೊಸರನ್ನ
ಅಜ್ಜಿಯ ಕೈ ಸಾರು
ತಾತನ ಕೈ ಬೋಂಡ
ಎಲ್ಲರೂ ಒಟ್ಟು ಸೇರಲು
ಅಜ್ಜಿ ತಾತ ನೆಪಮಾತ್ರವಾಗಿರಲು

ಬಣ್ಣಗಳಿಲ್ಲದ ಬದುಕಲ್ಲಿ
ಸಂತೋಷ ನೆಮ್ಮದಿಗಳೆಷ್ಟಿತ್ತು! 

ಈಗ ತರಾವರಿ ಬಣ್ಣಗಳು...
ಸಂಬಂಧಗಳ ಬೆಸೆಯಲು
ಪುರುಸೊತ್ತಿಲ್ಲದಷ್ಟು ದೊಡ್ಡ 
ಬಣ್ಣದ ಲೋಕ!!

ಉದ್ಯೋಗದ ಸುತ್ತ ಬಣ್ಣ ಬಳಿದು
ಸಂಬಂಧಗಳ ಕಪ್ಪು‌ಬಿಳುಪು ಪ಼ೋಟೊ
ಎಫ಼್ ಬಿ, ವಾಟ್ಸಾಪ್, ಇನ್ಸ್ಟಾಗ್ರಾಮ್ 
ಚೌಕಟ್ಟಿನಲ್ಲಿ ಭದ್ರ!! 


Friday, December 6, 2019

ನಮ್ಮದಲ್ಲದ ನಮ್ಮೂರು!

ನಮ್ಮ ಊರು.. ಬೆಂಗಳೂರು..
ನಿಮ್ಮೂರಲ್ಲಿ ಸಿಗದದ್ದು ಸಿಗುವಂತ ದೊಡ್ಡೂರು!

ಮನೆಯಿಂದ ಹೊರಬಂದರೆ
ಟ್ರಾಫ಼ಿಕ್ ಸ್ವಾಗತ
ವಾಹನ ಸದ್ದುಗಳ ಮಧ್ಯೆ
ಹೇಳಿದ್ದೆಲ್ಲವೂ ಸ್ವಗತ!

ಶ್ರೀಮಂತರಿಗೆಂಬಂತೆ
ಮಾಡಿಟ್ಟ ಊರು
ಪಾದಾಚಾರಿಗಳಿಗೆ ನಡೆಯಲು 
ಜಾಗವೇ ಇಲ್ಲ ಒಂಚೂರು!

ರಸ್ತೆ ಮಧ್ಯ ಗುಂಡಿಗಳೋ
ಗುಂಡಿಗಳ ಮಧ್ಯೆ ರಸ್ತೆಯೋ
ದ್ವಿಚಕ್ರ ವಾಹನ ಸವಾರರರಿಗೆ
ಉಚಿತ ನಾಟ್ಯ ತರಗತಿಯೋ!

ಮನೆಯಿಂದ ಹೊರಗಡೆಯೇ  ಕಳೆವೆವು ಹೊತ್ತು!
ದುಪ್ಪಟ್ಟು ಬೆಲೆಯ ಬಾಡಿಗೆ ತೆತ್ತು
ಸಮಯವು ಇರದಿರೆ ಬೇಯಿಸಲು ತುತ್ತು
ದುಬಾರಿ ವಿದೇಶಿ ಮೇಕಪ್ ಹೊತ್ತು!

ಮಾಲುಮಂದಿರವೆಂಬ ಭೇದವಿಲ್ಲದೆ
ಗಾಡಿ, ಹೋಟೆಲ್ಲೆಂಬ ತಾರತಮ್ಯವಿಲ್ಲದೆ
ಎಲ್ಲಿ ನೋಡಿದರಲ್ಲಿ ಜನಸಾಗರ
ಕೋಟ್ಯಾಂತರ ಜನರಿಗೆ ಆಶ್ರಯವಾದ ನಗರ!

ಹಲವರಿಗೆ ಅನ್ನವಿತ್ತ ನಗರ
ಕೆಲವರಿಗೆ ಉದ್ಯೋಗವಿತ್ತ ನಗರ
ಮಿಕ್ಕವರಿಗೆ ವಿದ್ಯಾದಾತ ನಗರ
ಮಗದವರಿಗೆ ಜೊತೆಗಾರರನಿತ್ತ ನಗರ!

ಬನ್ನಿ, ಉಳಿಸೋಣ ಉದ್ಯಾನಗಳ
ಬೆಳೆಸೋಣ ಗಿಡಮರಗಳ
ಮನೆ ತ್ಯಾಜ್ಯಗಳ ಬೇರ್ಪಡಿಸಿ ನೀಡೋಣ
ಕಸವನ್ನ ಎಲ್ಲೆಂದರಲ್ಲಿ ಎಸಯದೆ ಇರೋಣ

ಪ್ಲಾಸ್ಟಿಕ್ ಬಳಕೆ ಕಡಿಮೆ‌ ಮಾಡೋಣ
ಜ಼ೀರೊ ವೇಸ್ಟ್ ಗುರಿ ಮುಟ್ಟೋಣ
ಪಬ್ಲಿಕ್ ಟ್ರಾನ್ಸಪೋರ್ಟ್ ಹೆಚ್ಚೆಚ್ವು ಬಳಸೋಣ
ಈ‌ ಮಣ್ಣಿನ ಋಣ ಕಿಂಚಿತ್ತಾದರೂ ತೀರಿಸೋಣ!












Tuesday, December 3, 2019

ವ್ಯತ್ತಾಸ

ಜಾಸ್ತಿ ಉಪ್ಪು ತಿಂದರೆ
ಬಿಪಿ ಏರಿ ಸಿಟ್ಟು 
ಹೆಚ್ಚತ್ತಂತೆ ಜನರಿಗೆ
ಅಡಿಗೆಗೆ ಉಪ್ಪು ಕಮ್ಮಿಯಾದರೆ
ಸಿಟ್ಟು ನೆತ್ತಿಗೇರತ್ತೆ 
ನಮ್ಮನೆಯವರಿಗೆ!

Saturday, November 30, 2019

ಗ್ರಹಿಕೆ

ಅದೇ ಮಾತುಗಳಿಗೆ
ಅವಳು ಒಲಿದಳು
ಇವಳು ಮುನಿದಳು

ವಿಧಿಯ ಬಗೆ

ಅಂದು ಬಯಸಿದ್ದು
ಕನಸ ಕಂಡಿದ್ದು
ಸಿಗಲಿಲ್ಲ
ಫಲಿಸಲಿಲ್ಲ...

ಹಿಂತಿರುಗಿ
ನೋಡೆ ಇಂದು
ಆಸೆಯ ಸಂಕೋಲೆಗಳೇ 
ಕಾಣುತ್ತಿವೆ!

ಆದದ್ದೆಲ್ಲಾ ಒಳಿತೇ ಆಯಿತು

Sunday, December 16, 2018

ಅಧ್ಯಾಪಕರು vs ವಿದ್ಯಾರ್ಥಿಗಳು

ನಮಗೆ ಇಂಜಿನಿಯರಿಂಗ್ ಅಲ್ಲಿ ಬೆಳಗ್ಗೆ ಬೆಳಗ್ಗೆ ತರಗತಿ ಶುರು ಆಗ್ತಾ ಇತ್ತು. ೭. ೩೦ಕ್ಕೆ ಮೊದಲ ತರಗತಿ. ಹುಡುಗರಿಗೆ, ನಡೆದು ಬರಲು ತಮ್ಮ ವಿದ್ಯಾರ್ಥಿ ನಿಲಯದಿಂದ ೨ ನಿಮಷ ಹಾಗು  ಹುಡುಗಿಯರಿಗೆ ೧೫ ನಿಮಿಷ. ನಮ್ಮಂತವರು, ಊರೊಳಗಿಂದ ಗಾಡಿಯಲ್ಲಿ ಬರೋರಿಗೆ ಕನಿಷ್ಠ ೧೫ ನಿಮಿಷ ಬೇಕಿತ್ತು. ಸುಮಾರು ಅಧ್ಯಾಪಕರೆಲ್ಲರೂ ಊರೊಳಗೆ ಮನೆ ಮಾಡಿಕೊಂಡಿದ್ದರು.

ಎಷ್ಟೋ ಬೆಳಗಿನ ತರಗತಿಗಳಿಗೆ ವಿದ್ಯಾರ್ಥಿಗಳು ಸ್ನಾನ ಮಾಡದೇ ಎದ್ದ  ತಕ್ಷಣ ಎದ್ದು ಬಿದ್ದು ಬಂದಿರೋರು. ನಮಗೆ ಲ್ಯಾಬ್ ಇದ್ದಾಗಂತೂ ೭. ೩೦ ಲ್ಯಾಬ್ ಯಾಕಾದರೂ ಇರತ್ತೋ ಅನ್ನಿಸುತಿತ್ತು. ವಿದ್ಯಾರ್ಥಿನಿಲಯದಲ್ಲಿರುವ ಸಹಪಾಠಿಗಳು ಸ್ನಾನ ಮಾಡದೆ ಬಂದು ನಮಗೆ ಹಿಂಸೆ ಆಗೋದು. ಸದ್ಯ ಹಲ್ಲಾದರೂ ಉಜ್ಜಿ ಬಂದಿರ್ತಾರಲ್ಲ ಅಂತ ಸಮಾಧಾನ ಮಾಡಿಕೊಳ್ಳುತ್ತಿದ್ದೆವು. ಎಷ್ಟೋ ವೇಳೆ ಕೆಲವು ಅಧ್ಯಾಪಕರು ಸಹ ಸ್ನಾನವಿಲ್ಲದೆ ತಲೆ ಬಾಚಿಕೊಳ್ಳದೆ ಬಂದು ಬಿಡುತ್ತಿದ್ದರಂತೆ.

ಹೀಗೆ, ನನ್ನ ಗೆಳತಿಯ ತರಗತಿಯಲ್ಲಿ ೭. ೩೦ಗೆ ಎಲ್ಲ ವಿದ್ಯಾರ್ಥಿಗಳು ಅಧ್ಯಾಪಕರಿಗೆ ಕಾದು ಕುಳಿತಿದ್ದಾರೆ. ಐದು ನಿಮಷ ಆಗಿದೆ ಅಧ್ಯಾಪಕರು ಬಂದಿಲ್ಲ. ಅಧ್ಯಾಪಕರದ್ದೋ ಇತ್ತೀಚಿಗೆ ಮದುವೆ ಆಗಿದೆ. ವಿದ್ಯಾರ್ಥಿಗಳೆಲ್ಲ ಹೊಸದಾಗಿ ಮದ್ವೆ ಆಗಿದೆ ಸರ್ ಗೆ ಬರೋದು ತಡ ಅನ್ನಿಸುತ್ತೆ, ಬರಲ್ಲವೇನೋ ಅಂತೆಲ್ಲ ತಮ್ಮ ಅರೆಜ್ಞಾನ ಪ್ರದರ್ಶಿಸುತ್ತಾ ಖುಷಿಯಾಗಿ ತರಗತಿಯಿಂದ ಹೋರಡಬೇಕು  ಅನ್ನುವಷ್ಟರಲ್ಲಿ, ಅಧ್ಯಾಪಕರು ಬಂದಿದ್ದಾರೆ. ಪಾಪ, ಅವರು ನಿದ್ದೆ ಇಂದ ಆಗ ತಾನೇ ಎದ್ದು ಬಂದಂಗಿದೆ. ತಡವಾಗಿದ್ದಕ್ಕೆ ಎಲ್ಲರಲ್ಲೂ ಕ್ಷಮೆ ಕೇಳಿ ಪಾಠ ಶುರು ಮಾಡಿದ್ದಾರೆ. ಕಪ್ಪು ಹಲಗೆಯ ಮೇಲೆ ಅವತ್ತಿನ ವಿಷಯ ಬರೆದು, ವಿಷಯಕ್ಕೆ ಸಂಬಂಧಿಸಿದ ಚಿತ್ರ ಬರೆಯುತ್ತಿದ್ದಾರೆ. ಈ ಕಡೆ ವಿಧ್ಯಾರ್ಥಿಗಳದ್ದು ಮುಸಿ ಮುಸಿ ನಗು. ಅವರು ಈ ಕಡೆ ತಿರುಗಕ್ಕೆ ನಗು ನಿಲ್ಲತ್ತೆ. ಮತ್ತೆ ಬರೆಯಕ್ಕೆ ಶುರು ಮಾಡಲು, ಮುಸಿ ಮುಸಿ ನಗು. ಹೀಗೆ ಎರಡು ಮೂರು ಸರ್ತಿ ಆಗಲು, ಅಧ್ಯಾಪಕರಿಗೆ ಪಿತ್ತ ನೆತ್ತಿಗೆ ಏರಿ, "ಏನದು ಬೆಳಗ್ಗೆ ಬೆಳಗ್ಗೆ ನಗು? ಇಲ್ಲೇನು ಡ್ರಾಮಾ ನಡಿತಾ ಇದೆಯ?" ಅಂತ ರೇಗಿದರು. ಎಲ್ಲರೂ ಮತ್ತೆ ಮುಸಿ ಮುಸಿ ನಗು. ಅಧ್ಯಾಪಕರಿಗೆ, "ಈಗ ಏನಕ್ಕೆ ನಗ್ತಾ ಇದ್ದೀರಾ ಹೇಳ್ತೀರೋ ಅಥವಾ ಕ್ಲಾಸ್ ಸಸ್ಪೆಂಡ್ ಮಾಡಲೋ? " ಅಂತ ಅವಾಜ್ ಹಾಕಿದರು. ಒಬ್ಬ ಪೋಕರಿ ಹುಡುಗ ಎದ್ದು ನಿಂತು, " ಸರ್, ಅದೂ , ಅದೂ " ಅಧ್ಯಾಪಕರು," ಏನ್ ಅದೂ.. ಬೇಗ ಹೇಳಿ ಮುಗಿಸಿ". ಹುಡುಗ, "ಸರ್, ನಿಮ್ಮ ಕತ್ತಿನ ಮೇಲೆ ಬಿಂದಿ ಇದೆ" ಅಂದ ತಕ್ಷಣ ಮತ್ತೆ ಎಲ್ಲ ಜೋರು ನಗು.
ಅಧ್ಯಾಪಕರಿಗೆ ಮುಜುಗರ ಆಗಿ, "ಎಲ್ಲಿ, ನೆನ್ನೆ ಲೆಕ್ಕ ಕೊಟ್ಟಿದ್ನಲ್ಲ, ಎಷ್ಟು ಜನ ಮಾಡಿದ್ದೀರಾ, ನೋಟ್ಸ್ ತೆಗೀರಿ". ತರಗತಿಯಲ್ಲಿ ನಿಶಬ್ದ ಆವರಿಸಿತು.

ಹೀಗೆ ಒಂದಲ್ಲ ಒಂದು ಕಾರಣಕ್ಕೆ ವಿದ್ಯಾರ್ಥಿಗಳಿಗೂ ಅಧ್ಯಾಪಕ ವರ್ಗಕ್ಕೂ ಒಂದು ರೀತಿಯ  ಗುದ್ದಾಟ ನಡೀತಾನೇ ಇತ್ತು.

 ನಮ್ಮ ಪಕ್ಕದ ಕೊಠಡಿಯಲ್ಲಿ ಆಟೋಮೊಬೈಲ್ ತರಗತಿ ನಡೆಯೋದು. ಆಟೋಮೊಬೈಲ್ ಹುಡುಗರಂತೂ ತುಂಬಾ ತರಲೆಗಳು. ಆಟೋಮೊಬೈಲ್ ಅಧ್ಯಾಪಕರುಗಳಲ್ಲಿ ಒಬ್ಬರು ಬಾಗಿಲು ಮುಚ್ಚಿ ಪಾಠ ಮಾಡೋರು. ಹಾಗೆ ಒಂದು ದಿನ ಇವರ ಪಾಠ ನಡೀತಾ ಇತ್ತು. ನಮಗೆ ಅಧ್ಯಾಪಕರು ಬಾರದ ಕಾರಣ ನಾವೆಲ್ಲಾ ಹೊರಗಡೆ ನಿಂತು ಮಾತಾಡ್ತಾ ಇದ್ವಿ. ಜಾಕೆಟ್ ಮತ್ತು ಹೆಲ್ಮೆಟ್ ಧರಿಸಿದ ಒಬ್ಬ ಹುಡುಗ ಬಂದ. ನಾವು ಏನು ಆಗುತ್ತಿದೆ ಅಂತ ನೋಡುವ ಹೊತ್ತಿಗೆ, ಬಾಗಿಲು ಮುಚ್ಚಿದ ಆಟೋಮೊಬೈಲ್ ತರಗತಿಯ ಬಾಗಿಲು ತೆಗೆದು 'ಭೇ.... ' ಎಂದು ಕೂಗಿ, ಅಧ್ಯಾಪಕರಿದ್ದ ಡೆಸ್ಕ್ಗೆ ಹೋಗಿ ಕೈ ಮುಗಿದು ವಾಪಸ್ಸು ಓಡಿ  ಬಿಟ್ಟ. ಅವನ ಹಿಂದೀನೇ duster ತೋರಿ ಬಂತು. ಆದರೆ ಗುರಿ ತಪ್ಪಿತ್ತು.
ನಮಗೆಲ್ಲಾ ನಗು. ಆಟೋಮೊಬೈಲ್ ಅಧ್ಯಾಪಕರು, ಹೊರಗೆ ಬಂದು ಯಾರದು ಎಂದು ಕೇಳಿದರು. ನಮಗೆ ಯಾರಿಗೂ ಅದು ಯಾರು ಅಂತ ತಿಳಿಯದು. ನಾವೆಲ್ಲಾ ಮೂಕ ವಿದ್ಯಾರ್ಥಿಗಳಂತೆ ನಮ್ಮ ತರಗತಿಗೆ ಹೋಗಿ ಕೂತುಬಿಟ್ವಿ. ಅಧ್ಯಾಪಕರು ಕೆಂಡಾಮಂಡಲವಾಗಿ, ಅಲ್ಲೇ ನಿಲ್ಲಿಸಿದ ತಮ್ಮ ಬೈಕ್ ಹತ್ತಿ ಅವನನ್ನು ಹುಡುಕುತ್ತ ಕ್ಯಾಂಟೀನ್  ಕಡೆ ಹೋದರು.

ಆಟೋಮೊಬೈಲ್ ಗೆಳೆಯರಿಂದ ಮಾರನೇ ದಿನ ತಿಳಿಯಿತು. ಆ ಹುಡುಗ ಆಟೋಮೊಬೈಲ್ ವಿದ್ಯಾರ್ಥಿ.  ಇಲ್ಲಿ ತರಗತಿ ಅಡಚಣೆ ಮಾಡಿ, 'mini forest' ಗೆ ಹೋಗಿ, ಜಾಕೆಟ್ ಮತ್ತು ಹೆಲ್ಮೆಟ್ ಅನ್ನು  ಗೆಳೆಯನ ಕೈಯಲ್ಲಿ ಕೊಟ್ಟು ಕ್ಯಾಂಟೀನ್ ಗೆ ಹೋದನಂತೆ. ಅಲ್ಲಿ ತರಗತಿಯಲ್ಲಿದ್ದ ಅಧ್ಯಾಪಕರು, ಯಾರು ಈ ತಲೆಹರಟೆ ಮಾಡಿದ್ದು ಅಂತ ಹುಡುಕುತ್ತಿದ್ದರಂತೆ. ಇವನೂ ಅವರ ಜೊತೆ ಸೇರಿ, ಹುಡುಕತೊಡಗಿದನಂತೆ!

ಈ ತರ ಸನ್ನಿವೇಶಗಳು ದಿನ ನಿತ್ಯ ಒಂದಲ್ಲ ಒಂದು ತರಗತಿಯಲ್ಲಿ ನಡೀತಾನೇ ಇರ್ತ ಇತ್ತು.

ಒಂದು ವರ್ಷ ಇದ್ದಕ್ಕಿಂದ೦ತೆ, ವಿದ್ಯಾರ್ಥಿಗಳು ಅಧ್ಯಾಪರಿಗೆ 'feedback ' ಕೊಡಬೇಕು ಅಂತ ಶುರುವಾಯಿತು. ವಿದ್ಯಾರ್ಥಿಯ ಹೆಸರು ಬರೆಯುವ ಅಗತ್ಯವಿಲ್ಲ, ಬರೀ feedback ಬರೆದರೆ ಸಾಕು ಅಂತ notice ಬೋರ್ಡ್ ಅಲ್ಲಿ ಇತ್ತು.  ನಮಗೆಲ್ಲ ಆನಂದನೋ ಆನಂದ. ಯಾವಾಗಲು ಅಧ್ಯಾಪಕರಿಂದ ನಾವು 'feedback' ತೊಗೊಂಡು ತೊಗೊಂಡು ಬೇಸತ್ತಿದ್ದ ನಮಗೆ, ಇದೊಳ್ಳೆ ಸುವರ್ಣಾವಕಾಶ ಅನ್ನಿಸ್ತು. ಎಲ್ಲರು, ಇನೆಟ್ರ್ನಲ್ಸ್ ಗೆ ಸಹ ಅಷ್ಟು ತಯಾರಿ ನಡೆಸಿರಲಿಲ್ಲ. ಊರಿಗೆ ಮುಂಚೆನೇ ಎಲ್ಲ ಯಾವ ಯಾವ ಅಧ್ಯಾಪಕರಿಗೆ ಏನೇನು feedback ಗುರುತು ಹಾಕೊಂಡಿದ್ವಿ. ಕೆಲವರಂತೂ ಪುಟಗಟ್ಟಲೆ ಬರ್ಕೊಂಡು ಬಂದಿದ್ರು. feedback ಕೊಡೊ ದಿನಾಂಕ ನಿರ್ಧಾರವಾಯಿತು. ಆ ದಿನ ತರಗತಿಯಲ್ಲಿ ಶೇಕಡಾ ೧೦೦ ಹಾಜರಾತಿ! ಒಬ್ಬ ಅಂತೂ ೨೫ ಪುಟದ ತುಂಬಾ ಏನೇನೋ ಬರ್ಕೊಂಡ್ ಬಂದಿದ್ದ. ಸುಮಾರು ಎಲ್ಲರ ಹತ್ರ ಏನಿಲ್ಲ ಅಂದ್ರೂ ೩-೪ ಪುಟ feedback ಇತ್ತು, . feedback ತರಗತಿ ಶುರು ಆಯಿತು. feedback ತೊಗೊಳಕ್ಕೆ attender ಒಂದು ಬ್ಯಾಗ್ ತೊಗೊಂಡು ಬಂದ್ರು. ತರಗತಿಗೆ ಬಂದೋರೆ, "ಎಲ್ಲ feedback ಕೊಡಕ್ಕೆ ಸಿದ್ಧ ನ?" ಕೇಳಿದರು. ನಾವೆಲ್ಲಾ ಒಕ್ಕೊರಲಿನಿಂದ "ಹೌದು ಸರ್" ಅಂತ ಕಿರಿಚಿದ್ವಿ. ಅವರು ಎಲ್ಲರಿಗು ಒಂದೊಂದು ಹಾಳೆ ಕೊಡ್ತಾ ಬಂದ್ರು. ಹಿಂದೆ ಕೂತಿದ್ದ ನಮಗೆ ಏನು ಹಾಳೆ ಗೊತ್ತಾಗ್ತಾ ಇರಲಿಲ್ಲ. ಒಂದೇ ಹಾಳೆ ಕೊಟ್ರೆ ಸಾಕಾಗಲ್ಲ ಅಂತ ಆತಂಕಗೊಂಡ ಒಬ್ಬ ಸಹಪಾಠಿ, ಕೊನೆ ಬೆಂಚ್ ಇಂದ ಕೇಳಿದ, "ಅಡಿಷನಲ್ ಶೀಟ್ ಸಿಗತ್ತಾ ಸರ್?". ಹಾಳೆ ಸಿಕ್ಕವರೆಲ್ಲ ಹೋ ಎಂದು ನಕ್ಕರು. attender ಸಹಪಾಠಿಯನ್ನು ನೋಡಿ, " ಅಲ್ಲ ಮಗ, ಒಂದು ಪರೀಕ್ಷೆಲಾದ್ರು ಅಡಿಷನಲ್ ಶೀಟ್ ಉಪಯೋಗಿಸಿದ್ಯಾ?" ಅಂದ್ರು. ಈಗ ಎಲ್ಲರೂ ಹೋ ಎಂದು ನಕ್ಕರು. ಹಾಳೆ ಸಿಕ್ಕವರೆಲ್ಲ ಗೊಣಗ್ತಾ ಇದಾರೆ. ನಂಗು ಹಾಳೆ ಸಿಕ್ತು. ನೋಡಿದ್ರೆ ಅದೊಂದು ಫಾರಂ. ಅದರಲ್ಲಿ ಎಲ್ಲರ ಅಧ್ಯಾಪಕರ ಹೆಸರ ಕೆಳಗೆ ಎರಡು ಶೀರ್ಷಿಕೆ (heading ):
೧. my strengths
        ೧.
        ೨.
೨. areas to improve
          ೧.
          ೨.
ಎಲ್ಲ ವಿದ್ಯಾರ್ಥಿಗಳಿಗೂ ತುಂಬಾ ಆಶಾಭಂಗ ಆಯಿತು. ಎಲ್ಲ ತುಂಬಾ ದಿನಗಳಿಂದ ತಯಾರಿ ನಡೆಸಿ ಬಂದು ಇಲ್ಲಿ ನೋಡಿದರೆ ಎರಡೇ ಸಾಲು ಬರೆಯಕ್ಕೆ ಅವಕಾಶ. ಬೇಜಾರು ಮಾಡಿಕೊಂಡೆ, ಫಾರಂ ತುಂಬಿಸಿ ಕೊಟ್ಟರು. ಕೆಲವರು, ಫಾರಂ ಮೇಲೆ, ಕೆಳಗೆ, ಮಾರ್ಜಿನ್, ಹಿಂದಿನ ಭಾಗ ಎಲ್ಲ ಬಳಸಿ ಬರೆದರು. ನಾನು ನನ್ನ feedback ಬರೆದು ಬಂದೆ.

ಎಲ್ಲ ವಿದ್ಯಾರ್ಥಿಗಳು ತುಂಬಾ ಭರವಸೆ ಇಂದ feedback ಬರೆದಿದ್ದರು. ಆದರೆ, ದಿನ ನಿತ್ಯದಂತೆ, ಏನೂ ಬದಲಾವಣೆ ಇಲ್ಲದೆ ತರಗತಿಗಳು ನಡೆದವು.

ಒಂದು ವಾರದ ನಂತರ, ನಮ್ಮ ಒಬ್ಬ ಅಧ್ಯಾಪಕರು, ಪಾಠ ಮುಗಿಸಿ ಲೆಖ್ಖ ಕೊಟ್ಟು, ನನ್ನ ಹತ್ತಿರ ಬಂದರು. ನಾನು ಲೆಖ್ಖ ಮಾಡ್ತಾ ಇದ್ದವಳು ಕತ್ತು ಎತ್ತಿದೆ. "ದೇವರು ಕೊಟ್ಟಿರೋ ನಾಲಗೆ ಕಣಮ್ಮ. ಸ್ಪಷ್ಟವಾಗಿ ಕೇಳಲ್ಲ ಅಂದ್ರೆ ಏನು ಮಾಡಲಿ? ನನಗೆ ಇಷ್ಟೇ ಸ್ಪಷ್ಟವಾಗಿ ಮಾತಾಡಕ್ಕೆ ಆಗೋದು" ಅಂದರು. ನಂಗೆ ತಲೆ ಕೆಟ್ಟು ಹೋಯಿತು. ಇವರಿಗೆ ಹೇಗೆ ನಾನೆ ಈ feedback ಕೊಟ್ಟಿದ್ದು ಅಂತ ಗೊತ್ತಾಯಿತು ಅಂತ.

ಏನಾಗಿತ್ತು ಅಂದ್ರೆ, ನನಗೆ ಮೊದಲೇ ಇಂಜಿನಿಯರಿಂಗ್ ಅಲ್ಲಿ ಇಂಗ್ಲಿಷ್ ಮಾತಾಡೋ, ಬರಿಯೋ ವಿಶ್ವಾಸ ಕಮ್ಮಿ ಇತ್ತು. ಈ ಸರ್ ಮಾತಾಡದು ನಂಗೆ ಅರ್ಥಾನೇ ಆಗ್ತಾ ಇರಲಿಲ್ಲ. ಇಂಗ್ಲಿಷ್ ಅಲ್ಲಿ ಹೇಗೆ ಬರೆಯದು ತಿಳಿಯದೆ, ಕನ್ನಡದಲ್ಲಿ "ಮಾತಾಡದು ಸ್ಪಷ್ಟವಾಗಿ ಕೇಳಿಸಲ್ಲ" ಅಂತ ಬರೆದುಬಿಟ್ಟಿದ್ದೆ. ಈ ಮೇಷ್ಟ್ರಿಗೆ ಕನ್ನಡದಲ್ಲಿ ಇಷ್ಟು ಸ್ಪಷ್ಟವಾಗಿ ಬರೆಯಕ್ಕೆ ನನಗೆ ಮಾತ್ರ ಸಾಧ್ಯ ಅಂತ ಗೊತ್ತಾಗಿ, ನನ್ನ ಹತ್ತಿರ ಬಂದು, ಪಾಪ ಅವರ ದು:ಖ ತೋಡಿಕೊಂಡಿದ್ದಾರೆ. ನನಗೆ ಮಾತ್ರ ಅವತ್ತು ಬೇಜಾರಾಗಿತ್ತು.

ಹೀಗೆ ಅಧ್ಯಾಪಕರು ವಿದ್ಯಾರ್ಥಿಗಳ ಮಧ್ಯೆ ಗಲಾಟೆಗಳೂ ಇದ್ದೆ ಇರ್ತಿದ್ವು. ಆದರೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಒಬ್ಬ ನೆಚ್ಚಿನ ಅಧ್ಯಾಪಕರು ಇರ್ತಾರೆ. ಈ ವಿದ್ಯಾರ್ಥಿಗೆ ನಾನು ಅಚ್ಚುಮೆಚ್ಚು ಅಂತ ಅರಿತ ಅಧ್ಯಾಪಕರುಗಳಿಗೆ, ಆ ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವ ಅವಕಾಶ ಇರುತ್ತೆ. ಅದನ್ನರಿತು, ಆ ಜವಾಬ್ದಾರಿಯನ್ನು ಸ್ವೀಕರಿಸುವ ಗುರು ವೃಂದಕ್ಕೆ ನಮೋ ನಮಃ. 

ಒಂದು ಪ್ರೇಮ ಕವಿತೆ

ನಾ ನಿನ್ನ  ಅರಸದೆ, ಬಯಸದೆ  ನೀ ನನ್ನ  ಅರಸದೆ, ಬಯಸದೆ  ವಿಧಿಯು ನಮ್ಮ  ಕೂಡಿಸಿರೆ ನಮ್ಮೀ ನಿತ್ಯ ಮಿಲನ  ಸುದೀರ್ಘ ಪಯಣ   ಹಾಕಿದೆ ಬುನಾದಿ  ನನ್ನ ಬದುಕಿಗೆ  ನನ್ನ ಮನದಲಿ...