Sunday, December 16, 2018

ಅಧ್ಯಾಪಕರು vs ವಿದ್ಯಾರ್ಥಿಗಳು

ನಮಗೆ ಇಂಜಿನಿಯರಿಂಗ್ ಅಲ್ಲಿ ಬೆಳಗ್ಗೆ ಬೆಳಗ್ಗೆ ತರಗತಿ ಶುರು ಆಗ್ತಾ ಇತ್ತು. ೭. ೩೦ಕ್ಕೆ ಮೊದಲ ತರಗತಿ. ಹುಡುಗರಿಗೆ, ನಡೆದು ಬರಲು ತಮ್ಮ ವಿದ್ಯಾರ್ಥಿ ನಿಲಯದಿಂದ ೨ ನಿಮಷ ಹಾಗು  ಹುಡುಗಿಯರಿಗೆ ೧೫ ನಿಮಿಷ. ನಮ್ಮಂತವರು, ಊರೊಳಗಿಂದ ಗಾಡಿಯಲ್ಲಿ ಬರೋರಿಗೆ ಕನಿಷ್ಠ ೧೫ ನಿಮಿಷ ಬೇಕಿತ್ತು. ಸುಮಾರು ಅಧ್ಯಾಪಕರೆಲ್ಲರೂ ಊರೊಳಗೆ ಮನೆ ಮಾಡಿಕೊಂಡಿದ್ದರು.

ಎಷ್ಟೋ ಬೆಳಗಿನ ತರಗತಿಗಳಿಗೆ ವಿದ್ಯಾರ್ಥಿಗಳು ಸ್ನಾನ ಮಾಡದೇ ಎದ್ದ  ತಕ್ಷಣ ಎದ್ದು ಬಿದ್ದು ಬಂದಿರೋರು. ನಮಗೆ ಲ್ಯಾಬ್ ಇದ್ದಾಗಂತೂ ೭. ೩೦ ಲ್ಯಾಬ್ ಯಾಕಾದರೂ ಇರತ್ತೋ ಅನ್ನಿಸುತಿತ್ತು. ವಿದ್ಯಾರ್ಥಿನಿಲಯದಲ್ಲಿರುವ ಸಹಪಾಠಿಗಳು ಸ್ನಾನ ಮಾಡದೆ ಬಂದು ನಮಗೆ ಹಿಂಸೆ ಆಗೋದು. ಸದ್ಯ ಹಲ್ಲಾದರೂ ಉಜ್ಜಿ ಬಂದಿರ್ತಾರಲ್ಲ ಅಂತ ಸಮಾಧಾನ ಮಾಡಿಕೊಳ್ಳುತ್ತಿದ್ದೆವು. ಎಷ್ಟೋ ವೇಳೆ ಕೆಲವು ಅಧ್ಯಾಪಕರು ಸಹ ಸ್ನಾನವಿಲ್ಲದೆ ತಲೆ ಬಾಚಿಕೊಳ್ಳದೆ ಬಂದು ಬಿಡುತ್ತಿದ್ದರಂತೆ.

ಹೀಗೆ, ನನ್ನ ಗೆಳತಿಯ ತರಗತಿಯಲ್ಲಿ ೭. ೩೦ಗೆ ಎಲ್ಲ ವಿದ್ಯಾರ್ಥಿಗಳು ಅಧ್ಯಾಪಕರಿಗೆ ಕಾದು ಕುಳಿತಿದ್ದಾರೆ. ಐದು ನಿಮಷ ಆಗಿದೆ ಅಧ್ಯಾಪಕರು ಬಂದಿಲ್ಲ. ಅಧ್ಯಾಪಕರದ್ದೋ ಇತ್ತೀಚಿಗೆ ಮದುವೆ ಆಗಿದೆ. ವಿದ್ಯಾರ್ಥಿಗಳೆಲ್ಲ ಹೊಸದಾಗಿ ಮದ್ವೆ ಆಗಿದೆ ಸರ್ ಗೆ ಬರೋದು ತಡ ಅನ್ನಿಸುತ್ತೆ, ಬರಲ್ಲವೇನೋ ಅಂತೆಲ್ಲ ತಮ್ಮ ಅರೆಜ್ಞಾನ ಪ್ರದರ್ಶಿಸುತ್ತಾ ಖುಷಿಯಾಗಿ ತರಗತಿಯಿಂದ ಹೋರಡಬೇಕು  ಅನ್ನುವಷ್ಟರಲ್ಲಿ, ಅಧ್ಯಾಪಕರು ಬಂದಿದ್ದಾರೆ. ಪಾಪ, ಅವರು ನಿದ್ದೆ ಇಂದ ಆಗ ತಾನೇ ಎದ್ದು ಬಂದಂಗಿದೆ. ತಡವಾಗಿದ್ದಕ್ಕೆ ಎಲ್ಲರಲ್ಲೂ ಕ್ಷಮೆ ಕೇಳಿ ಪಾಠ ಶುರು ಮಾಡಿದ್ದಾರೆ. ಕಪ್ಪು ಹಲಗೆಯ ಮೇಲೆ ಅವತ್ತಿನ ವಿಷಯ ಬರೆದು, ವಿಷಯಕ್ಕೆ ಸಂಬಂಧಿಸಿದ ಚಿತ್ರ ಬರೆಯುತ್ತಿದ್ದಾರೆ. ಈ ಕಡೆ ವಿಧ್ಯಾರ್ಥಿಗಳದ್ದು ಮುಸಿ ಮುಸಿ ನಗು. ಅವರು ಈ ಕಡೆ ತಿರುಗಕ್ಕೆ ನಗು ನಿಲ್ಲತ್ತೆ. ಮತ್ತೆ ಬರೆಯಕ್ಕೆ ಶುರು ಮಾಡಲು, ಮುಸಿ ಮುಸಿ ನಗು. ಹೀಗೆ ಎರಡು ಮೂರು ಸರ್ತಿ ಆಗಲು, ಅಧ್ಯಾಪಕರಿಗೆ ಪಿತ್ತ ನೆತ್ತಿಗೆ ಏರಿ, "ಏನದು ಬೆಳಗ್ಗೆ ಬೆಳಗ್ಗೆ ನಗು? ಇಲ್ಲೇನು ಡ್ರಾಮಾ ನಡಿತಾ ಇದೆಯ?" ಅಂತ ರೇಗಿದರು. ಎಲ್ಲರೂ ಮತ್ತೆ ಮುಸಿ ಮುಸಿ ನಗು. ಅಧ್ಯಾಪಕರಿಗೆ, "ಈಗ ಏನಕ್ಕೆ ನಗ್ತಾ ಇದ್ದೀರಾ ಹೇಳ್ತೀರೋ ಅಥವಾ ಕ್ಲಾಸ್ ಸಸ್ಪೆಂಡ್ ಮಾಡಲೋ? " ಅಂತ ಅವಾಜ್ ಹಾಕಿದರು. ಒಬ್ಬ ಪೋಕರಿ ಹುಡುಗ ಎದ್ದು ನಿಂತು, " ಸರ್, ಅದೂ , ಅದೂ " ಅಧ್ಯಾಪಕರು," ಏನ್ ಅದೂ.. ಬೇಗ ಹೇಳಿ ಮುಗಿಸಿ". ಹುಡುಗ, "ಸರ್, ನಿಮ್ಮ ಕತ್ತಿನ ಮೇಲೆ ಬಿಂದಿ ಇದೆ" ಅಂದ ತಕ್ಷಣ ಮತ್ತೆ ಎಲ್ಲ ಜೋರು ನಗು.
ಅಧ್ಯಾಪಕರಿಗೆ ಮುಜುಗರ ಆಗಿ, "ಎಲ್ಲಿ, ನೆನ್ನೆ ಲೆಕ್ಕ ಕೊಟ್ಟಿದ್ನಲ್ಲ, ಎಷ್ಟು ಜನ ಮಾಡಿದ್ದೀರಾ, ನೋಟ್ಸ್ ತೆಗೀರಿ". ತರಗತಿಯಲ್ಲಿ ನಿಶಬ್ದ ಆವರಿಸಿತು.

ಹೀಗೆ ಒಂದಲ್ಲ ಒಂದು ಕಾರಣಕ್ಕೆ ವಿದ್ಯಾರ್ಥಿಗಳಿಗೂ ಅಧ್ಯಾಪಕ ವರ್ಗಕ್ಕೂ ಒಂದು ರೀತಿಯ  ಗುದ್ದಾಟ ನಡೀತಾನೇ ಇತ್ತು.

 ನಮ್ಮ ಪಕ್ಕದ ಕೊಠಡಿಯಲ್ಲಿ ಆಟೋಮೊಬೈಲ್ ತರಗತಿ ನಡೆಯೋದು. ಆಟೋಮೊಬೈಲ್ ಹುಡುಗರಂತೂ ತುಂಬಾ ತರಲೆಗಳು. ಆಟೋಮೊಬೈಲ್ ಅಧ್ಯಾಪಕರುಗಳಲ್ಲಿ ಒಬ್ಬರು ಬಾಗಿಲು ಮುಚ್ಚಿ ಪಾಠ ಮಾಡೋರು. ಹಾಗೆ ಒಂದು ದಿನ ಇವರ ಪಾಠ ನಡೀತಾ ಇತ್ತು. ನಮಗೆ ಅಧ್ಯಾಪಕರು ಬಾರದ ಕಾರಣ ನಾವೆಲ್ಲಾ ಹೊರಗಡೆ ನಿಂತು ಮಾತಾಡ್ತಾ ಇದ್ವಿ. ಜಾಕೆಟ್ ಮತ್ತು ಹೆಲ್ಮೆಟ್ ಧರಿಸಿದ ಒಬ್ಬ ಹುಡುಗ ಬಂದ. ನಾವು ಏನು ಆಗುತ್ತಿದೆ ಅಂತ ನೋಡುವ ಹೊತ್ತಿಗೆ, ಬಾಗಿಲು ಮುಚ್ಚಿದ ಆಟೋಮೊಬೈಲ್ ತರಗತಿಯ ಬಾಗಿಲು ತೆಗೆದು 'ಭೇ.... ' ಎಂದು ಕೂಗಿ, ಅಧ್ಯಾಪಕರಿದ್ದ ಡೆಸ್ಕ್ಗೆ ಹೋಗಿ ಕೈ ಮುಗಿದು ವಾಪಸ್ಸು ಓಡಿ  ಬಿಟ್ಟ. ಅವನ ಹಿಂದೀನೇ duster ತೋರಿ ಬಂತು. ಆದರೆ ಗುರಿ ತಪ್ಪಿತ್ತು.
ನಮಗೆಲ್ಲಾ ನಗು. ಆಟೋಮೊಬೈಲ್ ಅಧ್ಯಾಪಕರು, ಹೊರಗೆ ಬಂದು ಯಾರದು ಎಂದು ಕೇಳಿದರು. ನಮಗೆ ಯಾರಿಗೂ ಅದು ಯಾರು ಅಂತ ತಿಳಿಯದು. ನಾವೆಲ್ಲಾ ಮೂಕ ವಿದ್ಯಾರ್ಥಿಗಳಂತೆ ನಮ್ಮ ತರಗತಿಗೆ ಹೋಗಿ ಕೂತುಬಿಟ್ವಿ. ಅಧ್ಯಾಪಕರು ಕೆಂಡಾಮಂಡಲವಾಗಿ, ಅಲ್ಲೇ ನಿಲ್ಲಿಸಿದ ತಮ್ಮ ಬೈಕ್ ಹತ್ತಿ ಅವನನ್ನು ಹುಡುಕುತ್ತ ಕ್ಯಾಂಟೀನ್  ಕಡೆ ಹೋದರು.

ಆಟೋಮೊಬೈಲ್ ಗೆಳೆಯರಿಂದ ಮಾರನೇ ದಿನ ತಿಳಿಯಿತು. ಆ ಹುಡುಗ ಆಟೋಮೊಬೈಲ್ ವಿದ್ಯಾರ್ಥಿ.  ಇಲ್ಲಿ ತರಗತಿ ಅಡಚಣೆ ಮಾಡಿ, 'mini forest' ಗೆ ಹೋಗಿ, ಜಾಕೆಟ್ ಮತ್ತು ಹೆಲ್ಮೆಟ್ ಅನ್ನು  ಗೆಳೆಯನ ಕೈಯಲ್ಲಿ ಕೊಟ್ಟು ಕ್ಯಾಂಟೀನ್ ಗೆ ಹೋದನಂತೆ. ಅಲ್ಲಿ ತರಗತಿಯಲ್ಲಿದ್ದ ಅಧ್ಯಾಪಕರು, ಯಾರು ಈ ತಲೆಹರಟೆ ಮಾಡಿದ್ದು ಅಂತ ಹುಡುಕುತ್ತಿದ್ದರಂತೆ. ಇವನೂ ಅವರ ಜೊತೆ ಸೇರಿ, ಹುಡುಕತೊಡಗಿದನಂತೆ!

ಈ ತರ ಸನ್ನಿವೇಶಗಳು ದಿನ ನಿತ್ಯ ಒಂದಲ್ಲ ಒಂದು ತರಗತಿಯಲ್ಲಿ ನಡೀತಾನೇ ಇರ್ತ ಇತ್ತು.

ಒಂದು ವರ್ಷ ಇದ್ದಕ್ಕಿಂದ೦ತೆ, ವಿದ್ಯಾರ್ಥಿಗಳು ಅಧ್ಯಾಪರಿಗೆ 'feedback ' ಕೊಡಬೇಕು ಅಂತ ಶುರುವಾಯಿತು. ವಿದ್ಯಾರ್ಥಿಯ ಹೆಸರು ಬರೆಯುವ ಅಗತ್ಯವಿಲ್ಲ, ಬರೀ feedback ಬರೆದರೆ ಸಾಕು ಅಂತ notice ಬೋರ್ಡ್ ಅಲ್ಲಿ ಇತ್ತು.  ನಮಗೆಲ್ಲ ಆನಂದನೋ ಆನಂದ. ಯಾವಾಗಲು ಅಧ್ಯಾಪಕರಿಂದ ನಾವು 'feedback' ತೊಗೊಂಡು ತೊಗೊಂಡು ಬೇಸತ್ತಿದ್ದ ನಮಗೆ, ಇದೊಳ್ಳೆ ಸುವರ್ಣಾವಕಾಶ ಅನ್ನಿಸ್ತು. ಎಲ್ಲರು, ಇನೆಟ್ರ್ನಲ್ಸ್ ಗೆ ಸಹ ಅಷ್ಟು ತಯಾರಿ ನಡೆಸಿರಲಿಲ್ಲ. ಊರಿಗೆ ಮುಂಚೆನೇ ಎಲ್ಲ ಯಾವ ಯಾವ ಅಧ್ಯಾಪಕರಿಗೆ ಏನೇನು feedback ಗುರುತು ಹಾಕೊಂಡಿದ್ವಿ. ಕೆಲವರಂತೂ ಪುಟಗಟ್ಟಲೆ ಬರ್ಕೊಂಡು ಬಂದಿದ್ರು. feedback ಕೊಡೊ ದಿನಾಂಕ ನಿರ್ಧಾರವಾಯಿತು. ಆ ದಿನ ತರಗತಿಯಲ್ಲಿ ಶೇಕಡಾ ೧೦೦ ಹಾಜರಾತಿ! ಒಬ್ಬ ಅಂತೂ ೨೫ ಪುಟದ ತುಂಬಾ ಏನೇನೋ ಬರ್ಕೊಂಡ್ ಬಂದಿದ್ದ. ಸುಮಾರು ಎಲ್ಲರ ಹತ್ರ ಏನಿಲ್ಲ ಅಂದ್ರೂ ೩-೪ ಪುಟ feedback ಇತ್ತು, . feedback ತರಗತಿ ಶುರು ಆಯಿತು. feedback ತೊಗೊಳಕ್ಕೆ attender ಒಂದು ಬ್ಯಾಗ್ ತೊಗೊಂಡು ಬಂದ್ರು. ತರಗತಿಗೆ ಬಂದೋರೆ, "ಎಲ್ಲ feedback ಕೊಡಕ್ಕೆ ಸಿದ್ಧ ನ?" ಕೇಳಿದರು. ನಾವೆಲ್ಲಾ ಒಕ್ಕೊರಲಿನಿಂದ "ಹೌದು ಸರ್" ಅಂತ ಕಿರಿಚಿದ್ವಿ. ಅವರು ಎಲ್ಲರಿಗು ಒಂದೊಂದು ಹಾಳೆ ಕೊಡ್ತಾ ಬಂದ್ರು. ಹಿಂದೆ ಕೂತಿದ್ದ ನಮಗೆ ಏನು ಹಾಳೆ ಗೊತ್ತಾಗ್ತಾ ಇರಲಿಲ್ಲ. ಒಂದೇ ಹಾಳೆ ಕೊಟ್ರೆ ಸಾಕಾಗಲ್ಲ ಅಂತ ಆತಂಕಗೊಂಡ ಒಬ್ಬ ಸಹಪಾಠಿ, ಕೊನೆ ಬೆಂಚ್ ಇಂದ ಕೇಳಿದ, "ಅಡಿಷನಲ್ ಶೀಟ್ ಸಿಗತ್ತಾ ಸರ್?". ಹಾಳೆ ಸಿಕ್ಕವರೆಲ್ಲ ಹೋ ಎಂದು ನಕ್ಕರು. attender ಸಹಪಾಠಿಯನ್ನು ನೋಡಿ, " ಅಲ್ಲ ಮಗ, ಒಂದು ಪರೀಕ್ಷೆಲಾದ್ರು ಅಡಿಷನಲ್ ಶೀಟ್ ಉಪಯೋಗಿಸಿದ್ಯಾ?" ಅಂದ್ರು. ಈಗ ಎಲ್ಲರೂ ಹೋ ಎಂದು ನಕ್ಕರು. ಹಾಳೆ ಸಿಕ್ಕವರೆಲ್ಲ ಗೊಣಗ್ತಾ ಇದಾರೆ. ನಂಗು ಹಾಳೆ ಸಿಕ್ತು. ನೋಡಿದ್ರೆ ಅದೊಂದು ಫಾರಂ. ಅದರಲ್ಲಿ ಎಲ್ಲರ ಅಧ್ಯಾಪಕರ ಹೆಸರ ಕೆಳಗೆ ಎರಡು ಶೀರ್ಷಿಕೆ (heading ):
೧. my strengths
        ೧.
        ೨.
೨. areas to improve
          ೧.
          ೨.
ಎಲ್ಲ ವಿದ್ಯಾರ್ಥಿಗಳಿಗೂ ತುಂಬಾ ಆಶಾಭಂಗ ಆಯಿತು. ಎಲ್ಲ ತುಂಬಾ ದಿನಗಳಿಂದ ತಯಾರಿ ನಡೆಸಿ ಬಂದು ಇಲ್ಲಿ ನೋಡಿದರೆ ಎರಡೇ ಸಾಲು ಬರೆಯಕ್ಕೆ ಅವಕಾಶ. ಬೇಜಾರು ಮಾಡಿಕೊಂಡೆ, ಫಾರಂ ತುಂಬಿಸಿ ಕೊಟ್ಟರು. ಕೆಲವರು, ಫಾರಂ ಮೇಲೆ, ಕೆಳಗೆ, ಮಾರ್ಜಿನ್, ಹಿಂದಿನ ಭಾಗ ಎಲ್ಲ ಬಳಸಿ ಬರೆದರು. ನಾನು ನನ್ನ feedback ಬರೆದು ಬಂದೆ.

ಎಲ್ಲ ವಿದ್ಯಾರ್ಥಿಗಳು ತುಂಬಾ ಭರವಸೆ ಇಂದ feedback ಬರೆದಿದ್ದರು. ಆದರೆ, ದಿನ ನಿತ್ಯದಂತೆ, ಏನೂ ಬದಲಾವಣೆ ಇಲ್ಲದೆ ತರಗತಿಗಳು ನಡೆದವು.

ಒಂದು ವಾರದ ನಂತರ, ನಮ್ಮ ಒಬ್ಬ ಅಧ್ಯಾಪಕರು, ಪಾಠ ಮುಗಿಸಿ ಲೆಖ್ಖ ಕೊಟ್ಟು, ನನ್ನ ಹತ್ತಿರ ಬಂದರು. ನಾನು ಲೆಖ್ಖ ಮಾಡ್ತಾ ಇದ್ದವಳು ಕತ್ತು ಎತ್ತಿದೆ. "ದೇವರು ಕೊಟ್ಟಿರೋ ನಾಲಗೆ ಕಣಮ್ಮ. ಸ್ಪಷ್ಟವಾಗಿ ಕೇಳಲ್ಲ ಅಂದ್ರೆ ಏನು ಮಾಡಲಿ? ನನಗೆ ಇಷ್ಟೇ ಸ್ಪಷ್ಟವಾಗಿ ಮಾತಾಡಕ್ಕೆ ಆಗೋದು" ಅಂದರು. ನಂಗೆ ತಲೆ ಕೆಟ್ಟು ಹೋಯಿತು. ಇವರಿಗೆ ಹೇಗೆ ನಾನೆ ಈ feedback ಕೊಟ್ಟಿದ್ದು ಅಂತ ಗೊತ್ತಾಯಿತು ಅಂತ.

ಏನಾಗಿತ್ತು ಅಂದ್ರೆ, ನನಗೆ ಮೊದಲೇ ಇಂಜಿನಿಯರಿಂಗ್ ಅಲ್ಲಿ ಇಂಗ್ಲಿಷ್ ಮಾತಾಡೋ, ಬರಿಯೋ ವಿಶ್ವಾಸ ಕಮ್ಮಿ ಇತ್ತು. ಈ ಸರ್ ಮಾತಾಡದು ನಂಗೆ ಅರ್ಥಾನೇ ಆಗ್ತಾ ಇರಲಿಲ್ಲ. ಇಂಗ್ಲಿಷ್ ಅಲ್ಲಿ ಹೇಗೆ ಬರೆಯದು ತಿಳಿಯದೆ, ಕನ್ನಡದಲ್ಲಿ "ಮಾತಾಡದು ಸ್ಪಷ್ಟವಾಗಿ ಕೇಳಿಸಲ್ಲ" ಅಂತ ಬರೆದುಬಿಟ್ಟಿದ್ದೆ. ಈ ಮೇಷ್ಟ್ರಿಗೆ ಕನ್ನಡದಲ್ಲಿ ಇಷ್ಟು ಸ್ಪಷ್ಟವಾಗಿ ಬರೆಯಕ್ಕೆ ನನಗೆ ಮಾತ್ರ ಸಾಧ್ಯ ಅಂತ ಗೊತ್ತಾಗಿ, ನನ್ನ ಹತ್ತಿರ ಬಂದು, ಪಾಪ ಅವರ ದು:ಖ ತೋಡಿಕೊಂಡಿದ್ದಾರೆ. ನನಗೆ ಮಾತ್ರ ಅವತ್ತು ಬೇಜಾರಾಗಿತ್ತು.

ಹೀಗೆ ಅಧ್ಯಾಪಕರು ವಿದ್ಯಾರ್ಥಿಗಳ ಮಧ್ಯೆ ಗಲಾಟೆಗಳೂ ಇದ್ದೆ ಇರ್ತಿದ್ವು. ಆದರೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಒಬ್ಬ ನೆಚ್ಚಿನ ಅಧ್ಯಾಪಕರು ಇರ್ತಾರೆ. ಈ ವಿದ್ಯಾರ್ಥಿಗೆ ನಾನು ಅಚ್ಚುಮೆಚ್ಚು ಅಂತ ಅರಿತ ಅಧ್ಯಾಪಕರುಗಳಿಗೆ, ಆ ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವ ಅವಕಾಶ ಇರುತ್ತೆ. ಅದನ್ನರಿತು, ಆ ಜವಾಬ್ದಾರಿಯನ್ನು ಸ್ವೀಕರಿಸುವ ಗುರು ವೃಂದಕ್ಕೆ ನಮೋ ನಮಃ. 

Saturday, December 15, 2018

ಪರಿ ಪರಿ ಪರೀಕ್ಷೆ

ಇಂಟರ್ನಲ್ಸ್ ಮುಗ್ಸಾಯಿತಲ್ಲ. ಈಗ ಮುಖ್ಯ ಪರೀಕ್ಷೆಗೆ ಬರೋಣ. ಹಿಂದಿನ ಪೋಸ್ಟ್ ಅಲ್ಲಿ ಹೇಳಿದ ಹಾಗೆ, ಪರೀಕ್ಷೆ ಹತ್ತಿರ ಬರ್ತಾ ಇದ್ದ ಹಾಗೆ ಹುಡುಗ ಹುಡುಗಿಯರ ಅವತಾರಗಳು ಬೇರೆ ಆಗ್ತಾ ಇತ್ತು.
ಪರೀಕ್ಷೆಗೆ ಮುಂಚೆ ಓದಿಕೊಳ್ಳುವುದಕ್ಕೆ ಅಂತ ಸುಮಾರು ದಿನ ರಜಾ ಕೊಡೋರು. ಹೊರ ಊರಿಂದ ಓದಲು ಬಂದ  ಕೆಲವರು, ತಮ್ಮೂರಿಗೆ ಹೊರಟುಬಿಡುತ್ತಿದ್ದರು. ಸುಮಾರು ಜನ ವಿದ್ಯಾರ್ಥಿನಿಲಯದಲ್ಲೇ ಉಳಿದು ಓದೋರು.

ಈ ಅವಧಿಯಲ್ಲಿ ಹಾಗೂ ಪರೀಕ್ಷಾ ದಿನಗಳಲ್ಲಿ ವಿಶೇಷವಾಗಿ ವಿದ್ಯಾರ್ಥಿನಿಲಯದಲ್ಲಿ ಇರ್ತಿದ್ದ ಹುಡುಗಿಯರು, ತಲೆ ತುಂಬಾ ಎಣ್ಣೆ ಹಚ್ಚಿ(ಬೇರೆ ಸಮಯದಲ್ಲಿ, ಕೂದಲಿಗೆ ಎಣ್ಣೆ ವಾಸನೇನು ಸೋಕಿರಲಿಕ್ಕಿಲ್ಲ) ಕೂದಲು ಗಂಟು ಹಾಕಿ(ಬೇರೆ ದಿನಗಳಲ್ಲಿ ಹೊರಗಡೆ ಬಂದಾಗ, ಕೂದಲು ಕಟ್ಟಿರಲಿಕ್ಕೆ ಇಲ್ಲ)  ಆ ಗಂಟಿಗೊಂದು ಪೆನ್  ಸಿಕ್ಕಿಸಿ, ಒಂದು ಕೈಯಲ್ಲಿ ಪುಸ್ತಕ ಹಿಡಿದು ಓಡಾಡೋದು.

ಹುಡುಗರ ಅವತಾರ ಇನ್ನೊಂದು ತರ. ಹಾಕಿದ್ದ ಬಟ್ಟೆನೆ ಹಾಕುತ್ತಾ(ಒಗೆಯದೆ ), ಮೀಸೆ, ಗಡ್ಡ ಬೋಳಿಸದೆ, ರಾತ್ರೋ ರಾತ್ರಿ ಟೀ ಅಂಗಡಿಗೆ ಹೋಗಿ ಟೀ ಕುಡಿಯೋದು.

ಈ ಅವತಾರದ ಅವಕಾಶಗಳು, ವಿದ್ಯಾರ್ಥಿನಿಲಯದದಲ್ಲಿ ನೆಲೆಸಿದವರಿಗೆ ಮಾತ್ರ. ಮನೆಯಲ್ಲಿದ್ದವರಿಗೆ ಈ ತರದ ವೇಷ ಭೂಷಣಗಳ ಅವಕಾಶ ಇರಲಿಲ್ಲ. 

ಪರೀಕ್ಷೆಗೆ ಬರೋ ದಾರಿಯಲ್ಲೂ ಕೆಲವರು ಪುಸ್ತಕ ಓದಿಕೊಂಡೆ ಬರೋರು. ಆರು ತಿಂಗಳಲ್ಲಿ ಓದಿ ಕಲಿಯಕ್ಕೆ ಆದ/ಆಗದ್ದನ್ನು, ಪರೀಕ್ಷೆಗೆ ಬರೋ ದಾರಿಯಲ್ಲಿ ಓದಿ, ಹೇಗೆ ತಿಳಿಯುತ್ತಿದ್ದರೋ, ನೆನಪಿಟ್ಟುಕೊಳ್ಳುತ್ತಿದ್ದರೋ  ನನಗೆ ಇನ್ನೂ ಅರ್ಥ ಆಗಿಲ್ಲ.

ಹೀಗೆ ಒಂದು ಪರೀಕ್ಷೆಯ ದಿನ. ಪರೀಕ್ಷೆ ಮುಗಿಸಿ, ಹೊರಬಂದಾಗ ನನ್ನ ಒಬ್ಬ ಸಹಪಾಠಿ ಗೋಳಾಡ್ತಾ ಇದ್ದ. ಮಂಗಳೂರು ಕಡೆಯವ ಗೊಳೋ ಅಂತಿದಾನೆ, "ಎಂತ ಸಾವು ಮಾರಾಯ ನಂದು. ಆ ಹುಡುಗಿ ನನ್ನ ಬಾಳನ್ನೇ ಹಾಳು ಮಾಡಿಬಿಟ್ಲು! "

ನಾನು ಇದೇನಪ್ಪ, ಎಲ್ಲ ಪರೀಕ್ಷಾ ಕೊಠಡೀಲೆ ಇದ್ದೆವಲ್ಲ. ಇವನಿಗೆ ಯಾವ ಹುಡುಗಿ ಏನು ಮಾಡಿದಳು ಅನ್ಕೊಂಡೆ.
ಅವನು ಮುಂದುವರೆಸಿದ, ತನ್ನ ಗೋಳನ್ನ. "ನಾನು ಬರೆದದ್ದು ಉತ್ತರ ಸರಿ ಇತ್ತು ಮಾರಾಯ. ಅವಳು ಬರೆದದ್ದು ನೋಡಿ, ನಾನು ಬರೆದ ಉತ್ತರ ತಪ್ಪು  ಎಂದು ತಿಳಿದು, ಅದು ಹೊಡೆದು ಹಾಕಿ, ಅವಳ ಬರೆದ ಉತ್ತರ  ಬರೆದೆನಲ್ಲ ಮಾರಾಯ! ಅವಳು ಟಾಪರ್ ಅಂತ ನಂಬಿದ್ದೆ ತಪ್ಪಾಯಿತು. ಗೊತ್ತಿದ್ದದ್ದೇ ಅದೊಂದು ಉತ್ತರ. ಈಗ ಪಾಸಾಗೋದೇ ಕಷ್ಟ ಉಂಟಲ್ಲ, ಎಂತದು ಮಾಡೋದು!"

ಕರ್ಮಕ್ಕೆ, ಜನ ತಮಗಿಂತ  ಬೇರೆಯವರ ಮೇಲೆ ವಿಶ್ವಾಸ ಇಟ್ಟರೆ ಹೀಗೆ ಆಗೋದು!

ಇನ್ನೊಂದು ಸೆಮಿಸ್ಟರ್ ಅಲ್ಲಿ, ಎಲೆಕ್ಟ್ರಿಕಲ್ ಡ್ರಾಯಿಂಗ್ ಪರೀಕ್ಷೆ ಇತ್ತು. ಪ್ರೆಶ್ನೆ ಪತ್ರಿಕೆ ನೋಡಿದ ಮೇಲೆ ನನಗೆ ಸುಮಾರು ೬೦ ಅಂಕಿಗಳು ಬರೋದರಲ್ಲಿ ಅನುಮಾನ ಇಲ್ಲ ಅನ್ನಿಸಿತು. ನಿಧಾನಕ್ಕೆ ಬರುವ ಎಲ್ಲ ಪ್ರಶ್ನೆಗಳಿಗೂ ಚೆನ್ನಾಗಿ ಚಿತ್ರ ಬಿಡಿಸಿ, ಉತ್ತರ ಬರೆದು ಬಂದಿದ್ದೆ. ಫಲಿತಾಂಶದ ದಿನ ಪಾಸಾದವರ ಪಟ್ಟಿಯಲ್ಲಿ ನನ್ನ ಹೆಸರೇ ಇಲ್ಲ. ನೋಡಿದರೆ, ಎಲೆಕ್ಟ್ರಿಕಲ್ ಡ್ರಾಯಿಂಗ್ ನಲ್ಲಿ ನಪಾಸಾಗಿದ್ದೆ. ಆಷ್ಟೇನು  ಬೇಸರ ಆಗ್ಲಿಲ್ಲ. ಹಿಂದಿನ ವರ್ಷದಲ್ಲಿ ೩ ವಿಷಯಗಳಲ್ಲಿ ನಪಾಸಾಗಿದ್ದರಿಂದ ಈ ಸಲ ಒಂದೇ, ಪರ್ವಾಗಿಲ್ಲ ಅನ್ಕೊಂಡೆ. ಗೆಳೆಯ ಗೆಳತಿಯರೆಲ್ಲರ ಫಲಿತಾಂಶ ವಿನಿಮಯ ಮಾಡ್ಕೋತಾ ಇದ್ದಾಗ, ನನ್ನ ಗೆಳತಿಯೊಬ್ಬಳು ತುಂಬಾ ಸಪ್ಪಗಿದ್ದಳು. ನಾನು, ಬಹುಷಃ ಎರಡು ಮೂರು ವಿಷಯ ಹೋಗಿರಬೇಕು. ಮಾತಾಡಿಸಿ ಸಮಾಧಾನ ಮಾಡೋಣ ಅಂತ ಹೋದೆ. "ಏನಾಯಿತು ಫಲಿತಾಂಶ? ಯಾಕೆ ಸಪ್ಪಗಿದ್ಯಾ?" ಅಂತ ಕೇಳಿದೆ. ಅವಳು, ತಲೆ ಅಲ್ಲಾಡಿಸಿದಳು. ನನಗೆ ಅರ್ಥ ಆಗದೆ, "ಫೇಲ್ ಆಗಿದ್ಯಾ? ಎಷ್ಟು ಸಬ್ಜೆಕ್ಟ್?" ಕೇಳಿದೆ. ನಂದು ಒಂದು ಹೋಗಿದೆ, ನಪಾಸಾದ್ರೆ, ಮುಂದಿನ ಸಲ ಒಟ್ಟಿಗೆ ಓದಿ ಪಾಸ್ ಮಾಡೋಣ ಅಂತ ಸಮಾಧಾನ ಮಾಡೋಣ ಅನ್ನೋ ಉದ್ದೇಶದಿಂದ. ಅವಳು, "ಇಲ್ಲ, ಎಲ್ಲ ಪಾಸ್ ಆಗಿದೆ" ಅಂದ್ಲು. ಇದೊಳ್ಳೆ ಕಥೆ ಆಯಿತಲ್ಲ ಈ ಹುಡುಗೀದು. ನಾನಿಲ್ಲಿ ಒಂದು ನಪಾಸಾಗಿ ಆರಾಮಾಗಿ ಇದ್ದೀನಿ. ಇವಳು ಎಲ್ಲ ಪಾಸಾಗಿ ಸಪ್ಪಗಿದ್ದಾಳೆ. ಸ್ವಲ್ಪ ಕಿರಿಕಿರಿ ಆಗಿ "ಮತ್ತೆ ಇನ್ನೇನು ನಿನ್ನ ಪ್ರಾಬ್ಲಮ್?" ಅಂದೆ. ಅದಕ್ಕವಳು, "ನೀನು ಎಲೆಕ್ಟ್ರಿಕಲ್ ಡ್ರಾಯಿಂಗ್ ಫೇಲ್ ಆಗಿದ್ಯಲ್ಲ" ಅಂದ್ಲು. ಅದಕ್ಕೆ ನಾನು, "ಅದು ಸರಿ, ನಾನು ಫೇಲ್ ಆಗಿದ್ದಕ್ಕೂ, ನೀನು ಸಪ್ಪಗಿರೋದಕ್ಕೂ ಏನು ಸಂಬಂಧ?"
ಅದಕ್ಕವಳು: " ಪೂರ್ತಿ ಪೇಪರ್ ನಿನ್ನ ಉತ್ತರ ಪತ್ರಿಕೆ ಇಂದ ಕಾಪಿ ಮಾಡಿದ್ದೆ. ನಾನು ಪಾಸಾಗಿದ್ದೀನಿ, ೬೦ ಬಂದಿದೆ ಮಾರ್ಕ್ಸ್ ಅದಕ್ಕೆ" ಅಂದಾಗ, ದಂಗಾಗಿ ಸಪ್ಪಗಾಗೋ ಸರದಿ ನಂದು!

ಹೀಗೆ ಪರೀಕ್ಷೆಗೆ ಹಿಂದೆ ಮುಂದೆ ಒಂದಲ್ಲ ಒಂದು ತರದ ಒತ್ತಡ ಇದ್ದೆ ಇರ್ತ ಇತ್ತು. ಪರೀಕ್ಷೆಗೆ ಮುಂಚೆ ಪರೀಕ್ಷೆ ಬರೀಬೇಕಲ್ಲ ಅನ್ನೋ ಒತ್ತಡ, ಬರೆದಾದ ಮೇಲೆ ಫಲಿತಾಂಶ ಏನಾಗತ್ತೋ ಅನ್ನೋ ಒತ್ತಡ.
ನಾಕನೇ ಸೆಮಿಸ್ಟರ್ ಫಲಿತಾಂಶ ಬಂದಿತ್ತು. ಕಂಟ್ರೋಲ್ ಸಿಸ್ಟಮ್ಸ್ ಅಲ್ಲಿ ವಿಸ್ಯಾರ್ಥಿಗಳಿಗೆ ವಿಷಯದಮೇಲೆ ಕಂಟ್ರೋಲ್ ಹೋಯಿತೋ, ಉಪನ್ಯಾಸಕರಿಗೆ ಕಂಟ್ರೋಲ್ ತಪ್ಪಿತೋ, ಒಟ್ಟು ಸುಮಾರು ಜನ ನಪಾಸಾಗಿದ್ದರು. ಅದೃಷ್ಟವಶಾತ್, ಆ ಸೆಮಿಸ್ಟರ್ ನಂದು ಎಲ್ಲ ಪಾಸ್ ಆಗಿತ್ತು.

ನಾನು ಪ್ರೌಢ ಶಾಲೆಯಲ್ಲಿ ಇದ್ದಾಗ, ನಮ್ಮ ಅಣ್ಣ ಏನೋ ಮಾತಾಡುತ್ತ, ಕಾಲೇಜಿಗೆ ಬಂದ ಮೇಲೆ ಕಲಿಯೋದಕ್ಕೆ  ಉಪನ್ಯಾಸಕರ ಮೇಲೆ ಅವಲಂಬಿಸಬಾರದು ಅಂತ ಹೇಳಿಬಿಟ್ಟಿದ್ದ. ನನಗಿಂತ ಒಂದೂವರೆ ವರ್ಷ ದೊಡ್ಡವನ ಮಾತನ್ನು ನಾನು ತುಂಬಾ ಗಂಭೀರವಾಗಿ ತೊಗೊಂಡು, ಪಿ.ಯು.ಸಿ. ಇಂದಾನೆ, ಪಾಠಕೇಳೋದನ್ನ ಬಿಟ್ಟಿದ್ದೆ. ಯಾವುದೋ ಕೆಲ ವಿಷಯಗಳು, ನನಗೆ ವಿಷಯ ತುಂಬಾ ಇಷ್ಟ ಆಗೋ, ಪಾಠ ಮಾಡೋರು ಇಷ್ಟ ಆದಾಗಲೂ ಕೇಳ್ತಾ ಇದ್ದೆ. ಶ್ರದ್ಧೆ ಇಂದ ನೋಟ್ಸ್ ಬರೀತಾ ಇರಲಿಲ್ಲ. ಕೊನೆ ಬೆಂಚ್ ಅಲ್ಲಿ ಕೂತು, ಚುಕ್ಕಿ ಆಟ ಆಡೋದೋ, ಅಥವಾ ಒಂದು ಹನಿಗವನನೋ, ಕವನನೊ ಗೀಚಿ ಚೀಟಿ ಪಾಸ್ ಮಾಡಿ ಓದುಗರ ಅಭಿಪ್ರಾಯಕ್ಕೆ ಕಾಯ್ತಾ ಕೂತಿರ್ತಾ ಇದ್ದೆ.

ಹೀಗಾಗಿ, ಎಲ್ಲ ಕಿರು ಮತ್ತೆ ಮುಖ್ಯ ಪರೀಕ್ಷೆಗಳಿಗೂ ಮೊದಲು, ನನ್ನ ಸಹಪಾಠಿಯೊಬ್ಬಳ ನೋಟ್ಸ್ ಜೆರಾಕ್ಸ್ ಮಾಡಿಸಿ ಓದ್ತಾ ಇದ್ದೆ. ಆ ಹುಡುಗಿಗೆ ಅಧ್ಯಯನದಲ್ಲಿ ತುಂಬಾ ನಿಷ್ಠೆ, ನಿಯತ್ತು. ಒಂದು ದಿನ ಪಾಠ ತಪ್ಪಿಸದೇ, ಮೊದಲ ಬೆಂಚ್ ಅಲ್ಲಿ ಕೂತು, ಪಾಠಗಳನ್ನು ಕೇಳಿಸಿಕೊಂಡು, ನೋಟ್ಸ್ ಬರೆಯೋಳು. ನಾನು ಪರೀಕ್ಷೆಗೆ ಸ್ವಲ್ಪ ದಿನ ಮುಂಚೆ ಹೋಗಿ, ಅವಳ ನೋಟ್ಸ್ ಜೆರಾಕ್ಸ್ ಮಾಡಿ ಟೆಕ್ಸ್ಟ್ ಬುಕ್ ಜೊತೆಗೆ ಓದ್ಕೋತ  ಇದ್ದೆ.

ಹಾಗೆ, ಐದನೇ ಸೆಮಿಸ್ಟರ್ ಮೊದಲ ಕಿರಿ ಪರೀಕ್ಷೆ ಘೋಷಿಸಿದ ದಿನ ಸಂಜೆ, ಅವಳ ವಿದ್ಯಾರ್ಥಿನಿಲಯಕ್ಕೆ ಹೋದೆ. ಅವಳ ಜೊತೆ ಹರಟೆ ಹೊಡೆದು ನೋಟ್ಸ್ ಕೇಳಿದೆ, ಜೆರಾಕ್ಸ್ ಗೆ. ಅಷ್ಟು ಹೊತ್ತು ಸರಿಗೆ ಮಾತಾಡಿಸಿದ ಅವಳು, ಇದ್ದಕ್ಕಿಂದ್ದಂತೆ ಸಿಟ್ಟು ಮಾಡಿಕೊಂಡು, "ಹೋಗೆಮ್ಮ ಅನಿತಾ, ಇನ್ನು ಮೇಲೆ ನೀನು ನನ್ನ ನೋಟ್ಸ್ ಕೇಳಬೇಡ, ನಾನು ಕೊಡಲ್ಲ" ಅಂದ್ಲು. ಎರಡು ವರ್ಷ ಕೊಟ್ಟವಳಿಗೆ ಈಗ ಏನಾಯಿತು ಅನ್ಕೊಂಡೆ. "ಯಾಕೆ, ಏನಾಯಿತು? ನಾ ಏನಾದ್ರು ತಪ್ಪು ಮಾಡಿದ್ನ?" ಅಂತ ವಿಚಾರಿಸಿದೆ. ಅದಕ್ಕವಳು: "ನೀನು ಸರೀಗೆ ಕ್ಲಾಸ್ಗೆ ಬರಲ್ಲ. ಬಂದ್ರೂ, ಪಾಠ ಕೇಳಲ್ಲ, ನೋಟ್ಸ್ ಬರ್ಕೊಳಲ್ಲ. ಪರೀಕ್ಷೆಗೆ ಮುಂಚೆ ಬಂದು ನನ್ನ ನೋಟ್ಸ್ ಜೆರಾಕ್ಸ್ ಮಾಡ್ಸಿ ಓದಿ, ನೀನು ಕಂಟ್ರೋಲ್ ಸಿಸ್ಟಮ್ಸ್ ಪಾಸ್ ಆಗ್ಬಿಟ್ಟೆ, ನಾನು ಫೇಲ್ ಆಗ್ಬಿಟ್ಟೆ" ಅಂದ್ಲು. ನಂಗೆ ಜೋರು ನಗು. ನಗೋ ಹಾಗೆ ಇಲ್ಲ. ನಕ್ಕರೆ ನೋಟ್ಸ್ ಸಿಗಲ್ಲ ಇನ್ಮೇಲೆ.

ನಾನು ಅವಳಿಗೆ ರಮಿಸಿ, ಸಮಾಧಾನ ಹೇಳಿ, "ಯಾರೋ ಸರಿಯಾಗಿ ಉತ್ತರ ಪತ್ರಿಕೆ ವ್ಯಾಲ್ಯೂಯೇಷನ್ ಮಾಡಿಲ್ಲ ಅನ್ಸತ್ತೆ ಕಣೆ. ನಾನೇ ಪಾಸ್ ಆದಮೇಲೆ ನೀನ್ ಹೇಗೆ ಫೇಲ್ ಆಗಕ್ಕೆ ಸಾಧ್ಯ ಹೇಳು." ಅಂತೆಲ್ಲ ಹೇಳಿ, ನೋಟ್ಸ್ ಇಸ್ಕೊಂಡು ಬಂದೆ ಅನ್ನಿ.

ಆದರೂ, ಅವಳು ಹೇಳಿದ್ದರಲ್ಲಿ ನ್ಯಾಯ ಇದೆ ಅಲ್ವಾ? ;)

ಇವೆಲ್ಲ ಮೇಲ್ನೋಟಕ್ಕೆ ಇಂಜಿನಿಯರಿಂಗ್ ವಿಷಯಗಳ ಪರೀಕ್ಷೆಗಳಾದರೂ, ನನ್ನನ್ನು ಮುಂಬರುವ ಜೀವನದ ವಿವಿಧ ಪರೀಕ್ಷೆಗಳಿಗೆ ಸಿದ್ಧ ಮಾಡಿದ ಹಾಗೆ ಅನ್ಸತ್ತೆ, ಹಿಂತಿರುಗಿ ನೋಡಿದಾಗ!

Copy ಮಾಡಿ ನೋಡಿ!!

ಕಾಲೇಜು ಅಂದಮೇಲೆ ಪರೀಕ್ಷೆ ಇದ್ದೇ ಇರುತ್ತೆ. ಪರೀಕ್ಷೆಗಳಲ್ಲಿ ಮೂರು ತರ. ಒಂದು ಇಂಟರ್ನಲ್ಸ್ - ಮುಖ್ಯ ಪರೀಕ್ಷೆಗೆ ಮುಂಚೆ ಕಿರು ಪರೀಕ್ಷೆಗಳು. ಎರಡನೆಯದು ಲ್ಯಾಬ್ ಪರೀಕ್ಷೆ. ಮೂರನೆಯದು ಮುಖ್ಯ ಪರೀಕ್ಷೆ. ವಿದ್ಯಾರ್ಥಿಗಳಾಗಿ ನಾವು ಒಂದೊಂದಕ್ಕೂ ಒಂದೊಂದು ತರ ಅವತಾರ, ಒಂದೊಂದು ತರ ತಯಾರಿ ಮಾಡ್ತಿದ್ವಿ. ಈ ಮುಕ್ತಕದಲ್ಲಿ, ಕಿರಿ ಪರೀಕ್ಷೆಯ ಅನುಭವಗಳನ್ನು ಹೇಳುವೆ.

ಇಂಟರ್ನಲ್ಸ್ ೨೫ ಅಂಕಗಳಿಗೆ ಇರ್ತಾ ಇತ್ತು. ೧೫/೨೫ ಬಂದರೆ ಸುರಕ್ಷಿತ ಅಂತ ಅರ್ಥ. ೩ ಇಂಟರ್ನಲ್ಸ್ ಬರೆದು,  ಅದರಲ್ಲಿ ಸರಾಸರಿ ಅಂಕಗಳನ್ನು ಕೊನೆ ಪರೀಕ್ಷೆಗೆ ಸೇರಿಸ್ಕೊತ ಇದ್ರು.

ಸುಮಾರು ವಿದ್ಯಾರ್ಥಿಗಳು ೧೫ ಅಂಕಗಳನ್ನು ಪಡೆಯಕ್ಕೆ ಗುರಿ ಇಡೋರು. ಹಾಗಾಗಿ, ತುಂಬಾ ತಲೆ ಕೆಡಿಸ್ಕೊಂಡು ಓದ್ತಾ ಇರಲಿಲ್ಲ. ಅದು ಅಲ್ಲದೆ ಸುಮಾರು ಜನ ನಕಲು (copy) ಮಾಡೋರು. ಅದ್ರಲ್ಲೂ ನಮ್ಮ  ಎಲೆಕ್ಟ್ರಿಕಲ್ ಬ್ರಾಂಚ್ ಅಂತೂ ತೂಕು ಹೊಡೆಯೋದಕ್ಕೆ ತುಂಬಾ ಪ್ರಸಿದ್ಧಿಯಲ್ಲಿತ್ತು. ಎಲ್ಲ ಹೊಸದಾಗಿ ಸೇರಿದ ಕಿರಿಯ ಸಹಪಾಠಿಗಳಿಗೆ, ಹಿರಿಯ ಸಹಪಾಠಿಗಳು, ಮೊದಲ ವರುಷ ಕೊಡುವ ಪ್ರಪ್ರಥಮ  ತರಬೇತಿಯೆಂದರೆ, ಬ್ರಾಂಚ್ ವಿಷಯಗಳು ಪ್ರಾರಂಭವಾದ ಮೇಲೆ ನಪಾಸಾದರೆ ಬೇಜಾರು ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು. ತಮ್ಮ ಅನುಭವಗಳನ್ನು ಚಿತ್ರ ವಿಚಿತ್ರವಾಗಿ ಬಣ್ಣಿಸಿ, ಅರ್ಧ ತಾವು ನಪಾಸಾಗೋದಕ್ಕೆ ತಮ್ಮ ಉಪನ್ಯಾಸಕರನ್ನ ಜವಾಬ್ದಾರರನ್ನಾಗಿ ಮಾಡಿ ತಮ್ಮಅಪರಾಧೀ ಮನೋಭಾವವನ್ನು ಕಮ್ಮಿ ಮಾಡಿಕೊಳ್ಳುತ್ತ ಇದ್ದರು.

ನಮ್ಮಪ್ಪ, ಕೆ. ಇ. ಬಿ ನಲ್ಲಿಯೇ ಕೆಲಸ ಮಾಡ್ತಾ ಇದ್ದಿದ್ರಿಂದ, ನನಗೆ ಇಷ್ಟವಿಲ್ಲದಿದ್ದರೂ,  ಅವರು ಎಲೆಕ್ಟ್ರಿಕಲ್ ಅಂತ ನನಗೂ ಎಲೆಕ್ಟ್ರಿಕಲ್ ಕೊಡ್ಸಿದ್ರು. ಹಿರಿಯ ಸಹಪಾಠಿಗಳು ನನ್ನನ್ನು ಮಾನಸಿಕವಾಗಿ ನಪಾಸಾಗಲು ಸಿದ್ಧ ಮಾಡಿದ್ದರು!

ನಮಗೆ ಒಂದು 'solid state drives ' ಅನ್ನೋ ಒಂದು ವಿಷಯ ಇತ್ತು. ಅದು ಸಾಲಿಡ್ಡೋ, liquid ಓ. ನಮಗೆ ಮಾತ್ರ volatile ಆಗ್ತಾ ಇತ್ತು. ಪಾಪ ಆ ಉಪನ್ಯಾಸಕರು ನಮಗೆ ಅರ್ಥ ಆಗಲಿ ಅಂತ ತರಗತಿ ವೇಳೆ ಮುಗಿದ ಮೇಲೂ ಪಾಠ ಮಾಡಕ್ಕೆ, ನಮ್ಮ ತಲೆ ಒಳಗೆ ಒಂಚೂರು  ಏನು ಹೋಗ್ತಾ ಇರಲಿಲ್ಲ. ಎಲ್ಲ 'over head transmission ' ಆಗ್ತಾ ಇತ್ತು.

ಈ ವಿಷಯದ ಇಂಟರ್ನಲ್ಸ್ ಒಂದು ದಿನದ ಹಿಂದೆ ಘೋಷಣೆ ಮಾಡಿದ್ರು, ನಾಳೆ ಉಪ ಪರೀಕ್ಷೆ ಅಂತ! ಒಂದುವಾರ ಸಮಯ ಇದ್ದಿದ್ರೆ ಹೇಗೋ, ಹಾಗೂ ಹೀಗೂ  ಓದ್ಕೊಂಡ್ ಬರೀಬೋದಿತ್ತು. ಒಂದೇ ದಿನ ಸಮಯ ಇದ್ದಿದ್ದು.  ನನ್ನ ಗೆಳೆಯ ಗೆಳತಿಯರು ಯಾರೂ ಒತ್ತಡದಲ್ಲಿ ಇದ್ದ ಹಾಗೆ ಕಾಣಲಿಲ್ಲ. ಬದಲಾಗಿ, ಎಲ್ಲಾ ಹುರುಪಿನಿಂದ ಮೇಷ್ಟ್ರನ್ನ ಯಾವ ಕೊಠಡಿ ಯಲ್ಲಿ ಪರೀಕ್ಷೆ ಕೇಳ್ಕೊಂಡರು. ಹೇಗೆ ತಯಾರಾಗ್ತೀರಾ ಅಂದರೆ ಎಲ್ಲ ನಕಲು ಮಾಡೋದು ಅಂತ ತೀರ್ಮಾನ ಮಾಡಿದ್ರು. ನನಗೆ ತಲೆ ಬಿಸಿ ಶುರು ಆಯಿತು. ಅಲ್ಲಿವರೆಗೂ, ನಾನು ಜೀವನದಲ್ಲಿ ನಕಲು ಮಾಡಿರಲಿಲ್ಲ. ಈಗ ಏನಪ್ಪಾ ಗತಿ. ಹೇಗೆ ತಯಾರಿ ಮಾಡೋದು ಅಂತ ಯೋಚನೆ ಆಯಿತು. ನನ್ನ ಗೆಳೆತಿಯರು, 'ಇದೇನೇ ಅನಿತಾ, ಹುಡುಗರು ಆಡೋ ಎಲ್ಲ ಆಟ, ತರಲೆ ಮಾಡ್ತಿಯಾ, ಕಾಪಿ ಹೊಡೆಯಕ್ಕೆ ಹೆದರ್ತೀಯಲ್ಲೇ' ಅಂತ ಅಣಕಿಸಿದರು. ನಕಲು ಮಾಡದಿರುವುದು ನನ್ನ ಆದರ್ಶಗಳಲ್ಲಿ ಒಂದಾಗಿತ್ತು. ಆ ಆದರ್ಶನ ಬಿಡೋದು ಕಷ್ಟ ಆಗ್ತಿತ್ತು.

 ಸರಿ,ಈ ಸಲ ನಕಲು ಮಾಡೇ ಬಿಡೋಣ ಅಂತ ತೀರ್ಮಾನಿಸಿದೆ. ನನ್ನ ಗೆಳೆಯ ಗೆಳತಿಯರ ಹತ್ತಿರ ಹೇಗೆ ನಕಲು ಮಾಡೋದು ಅಂತ ಹೇಳಿಕೊಡಿ ಅಂದೆ. ಎಲ್ಲ ಸಂಜೆ ೫ ರ ನಂತರ ನಾಳೆ ಪರೀಕ್ಷೆ ಇರೋ ಕೊಠಡಿಗೆ ಬಾ ಅಂದ್ರು. ಅಲ್ಲಿ ಹೋದರೆ ಸುಮಾರು ಇಡೀ ಕ್ಲಾಸ್ ಅವರು ಹಾಜರಿದ್ದರು. ಅದೊಂದು ಡ್ರಾಯಿಂಗ್ ಹಾಲ್. ಎಲ್ಲ ತಾವೆಲ್ಲಿ ನಾಳೆ ಕೂರೋದು ಅಂತ ಮೇಜನ್ನು ಕಾದಿರಿಸಿದ್ರು (reserve ). ತಮ್ಮ ತಮ್ಮ ಮೇಜಿನ ಮೇಲೆ, ಮೇಜಿನ ಡ್ರಾ ಒಳಗೆ, ಕೆಳಗೆ ನೆಲದ ಮೇಲೆ ಸಣ್ಣ ಸಣ್ಣ diagram ಗಳು, code words ಗಳೆಲ್ಲ ಬರೆದರು. ನಂಗೂ ಬರೆಯಕ್ಕೆ ಹೇಳಿದ್ರು. ನಾನು ಹಾಗೆ ಬರೆದೆ.

ಮನೆಗೆ ಹೋಗಿ, ಸ್ವಲ್ಪ ಓದಿ, ಹಾಯಾಗಿ ನಿದ್ದೆ ಮಾಡಿದೆ, ನಕಲು ತಾನೇ ಮಾಡೋದು, ಇನ್ನೇನು ಚಿಂತೆ ಇಲ್ಲ ಅಂತ.

ಮಾರನೇ ದಿನ ತರಗತಿಗೆ ಹೋದಮೇಲೆ ಶುರುವಾಯಿತು ನೋಡಿ ಚಿಂತೆ. ಆ ಒಂದು ಗಂಟೆ ನನ್ನ ಜೀವನದ ಅತಿ ದೀರ್ಘ ಒಂದು ಗಂಟೆ.

ನನ್ನ ಗ್ರಹಾಚಾರಕ್ಕೆ, ನಾನು ನನ್ನ ಮೇಜಿನ ಮೇಲೆ ಬರೆದ ಯಾವುದೇ diagram ಪ್ರಶ್ನೆ ಪತ್ರಿಕೆಯ ಪ್ರಶ್ನೆಗಳಿಗೆ ಸಹಾಯವಾಗಲಿಲ್ಲ. ಕೆಳಗಡೆ ನೆಲದ ಮೇಲೆ ಬರೆದವು ಎಷ್ಟು ಸಣ್ಣಕ್ಕೆ ಇದ್ದವೆಂದರೆ, ಮೇಲಿಂದ ನಂಗೆ ಕಾಣದು, ಕೆಳಗೆ ಬಗ್ಗಿ ನೋಡುವ ಕಲೆ ನನಗೆ ಬರದು.

ಅಕ್ಕಪಕ್ಕದವ್ರು ಹೇಗೆ ನಕಲು ಮಾಡ್ತಿದ್ದಾರೆ ನೋಡಿ ಮಾಡೋಣ ಎಂದು ಕಣ್ಣು ಹಾಯಿಸಿದೆ. ಕೆಲವು ಗೆಳತಿಯರು, ಅಂಗೈ ಮೇಲೆ ಬರೆದುಕೊಂಡು ಬಂದಿದ್ದರೆ, ಒಬ್ಬ ಮಹಾನುಭಾವಳು, ಮೆಹಂದಿಯಲ್ಲಿ ಸರ್ಕ್ಯೂಟ್ diagram ಹಾಕೊಂಡು ಬಂದು ಬಿಟ್ಟಿದ್ಲು. ಹುಡುಗರು, ಶೆಕೆಯಲ್ಲೂ ಜಾಕೆಟ್ ಧರಿಸಿ, ತೋಳನ್ನು ಮಡಿಸಿ, ಅದರ ತುಂಬಾ ಚೀಟಿ ತುಂಬಿಸಿಕೊಂಡು ಬಂದಿದ್ದರು. ಇನ್ನು ಕೆಲವರು, ಎಲ್ಲ ಎಷ್ಟು ತ್ವರಿತವಾಗಿದ್ದರು ಅಂದ್ರೆ, ಮೇಷ್ಟ್ರು ಅಲ್ಲಿ ನೋಡಿ , ಇಲ್ಲಿ ತಿರುಗೋ ಅಷ್ಟರಲ್ಲಿ ನಕಲು ಮಾಡೋರು. ನನಗೋ. ಆ ನೆಲ ನೋಡಿ diagram  ಹುಡುಕೋ ಅಷ್ಟರಲ್ಲಿ ಎರಡು ಸಲ ತಲೆ ಎತ್ತಿ ಮೇಷ್ಟ್ರು ನೋಡಿಬಿಟ್ಟರಾ ಅಂತ ಆತಂಕದಿಂದ ನೋಡೋದು. ಭಯದಲ್ಲಿ, ನೋಡಿದ diagram ಬರೆಯೋ ಅಷ್ಟರಲ್ಲಿ ಮರೆತೇ ಹೋಗಿರೋದು. ಅಂತೂ ಇಂತೂ ಕಷ್ಟ ಪಟ್ಟು ಒಂದು diagram ಬರೆದು ಅದಕ್ಕೊಂದಷ್ಟು theory ಹುಟ್ಟಿಸಿ ಬರೆಯೋ ಅಷ್ಟರಲ್ಲಿ ಘಂಟೆ ಬಾರಿಸಿ ಆಗಿತ್ತು.
ಬ್ಲೂ ಬುಕ್ ಬಂದ  ಮೇಲೆ ಗೊತ್ತಾಯಿತು, ನಾನು ಗಾಬರಿಯಲ್ಲಿ, ಎರಡು diagram ಗಳ ಅರ್ಧ ಭಾಗಗಳನ್ನು ಸೇರಿಸಿ  ನನ್ನದೇ ಹೊಸ ಅನ್ವೇಷಣೆಯ diagram ಸೃಷ್ಟಿಸಿದ್ದ ಕಾರಣ, ೧ ಅಂಕ ಬಂದಿತ್ತು!! ಅವತ್ತೇ ಮೊದಲು, ಅವತ್ತೇ ಕೊನೆ. ಮತ್ತೆ ನಕಲು ಮಾಡೋ ರಗಳೆಗೆ ಹೋಗಿಲ್ಲ ನಾನು.
ನಾನು ಹಿಂದಿನ ಆ ಕಾಪಿ ಮಾಡಕ್ಕೆ ಮಾಡೋ ತಯಾರಿಗೆ ಬದಲು ಓದಿದ್ದಿದರೆ, ಒಂದು ಪ್ರಶ್ನೆಗಾದರು ಉತ್ತರ ಬರೆಯಬಹುದಿತ್ತು.

ಈ ಘಟನೆಯ ನಂತರ, ನನ್ನ ಸುಪ್ತ ಮನಸ್ಸು ನನ್ನನ್ನು ಯಾವಾಗಲೂ ನನ್ನ ದೌರ್ಬಲ್ಯಗಳನ್ನು ಜಯಿಸಲು ಪ್ರಯತ್ನಿಸುವುದಕ್ಕಿಂತ ನನ್ನ ಸಾಮರ್ಥ್ಯವನ್ನು ವೃದ್ಧಿಸುವುದಕ್ಕೆ ಹೆಚ್ಚು ಒತ್ತು  ಕೊಡುತ್ತಿತ್ತು ಅನಿಸುತ್ತೆ. ನನ್ನ ಆಫೀಸಿನ ಕೆಲಸದಲ್ಲೂ ನಾನು ಇದೆ ಮಂತ್ರವನ್ನು ಉಪಯೋಗಿಸುತ್ತಿರುವೆ.

ಈ ಇಂಟರ್ನಲ್ಸ್ ಅನ್ನು 'ಬ್ಲೂ ಬುಕ್' ಅನ್ನೋ ಪುಸ್ತಕದಲ್ಲಿ ಬರೀತಾ ಇದ್ವಿ. ಮೇಲಿನ ಕವರ್ ಮಾತ್ರ ತಿಳಿ ನೀಲಿ ಬಣ್ಣದ್ದಾಗಿರ್ತ ಇತ್ತು. ಇಂಟರ್ನಲ್ಸ್ ಮುಗಿದ ಒಂದು ವಾರದ ಮೇಲೆ, ಯಾವಾಗ ಅಂಕಗಳನ್ನು ಹೇಳ್ತಾರೋ ಕಾಯ್ತಾ ಇರ್ತಿದ್ವಿ.

ಹಾಗೆ ಒಂದು ವಿಷಯದ ಇಂಟರ್ನಲ್ಸ್ ಮುಗಿದು ಒಂದು ವಾರ ಆಗಿತ್ತು. ನಮ್ಮ ಮೇಷ್ಟ್ರು ತರಗತಿಗೆ 'ಬ್ಲೂ ಬುಕ್ಸ್ ' ತೊಗೊಂಡು  ಬಂದರು. ನಮಗೆಲ್ಲ ಕಾತರ. ಎಷ್ಟು ಬಂದಿದೆಯೋ ಅಂತ. ಈ ಮಾಸ್ತರು ಸ್ವಲ್ಪ ಉದಾರ ಮನೋಭಾವದವರಿದ್ದರು. ಒಂದು, ಇಂಟರ್ನಲ್ಸ್ ಗೆ ಮುಂಚೆನೇ ೧೦-೧೫ ಪ್ರಶ್ನೆಗಳನ್ನು ಕೊಡ್ತಾ ಇದ್ರು. ಅದರಲ್ಲಿ ೫ ಪ್ರಶ್ನೆಗಳು ಬರುತ್ತೆ. ತಯಾರಾಗಿ ಬನ್ನಿ ಅಂತ. ಎರಡನೆಯದು, ಸಣ್ಣ ಪುಟ್ಟ ತಪ್ಪುಗಳಿಗೆಲ್ಲ ಅಂಕಗಳನ್ನು  ಕಡಿತ ಮಾಡ್ತಾ ಇರಲಿಲ್ಲ. ಹಾಗಾಗಿ ಇವರ ವಿಷಯದಲ್ಲಿ ಯಾರು ನಪಾಸಾಗ್ತಾ ಇರಲಿಲ್ಲ.

ಎಲ್ಲರಿಗೂ ಬ್ಲೂ ಬುಕ್ ವಿತರಣೆ ಆಯಿತು. ಎಲ್ಲರಿಗೂ ೨೫ ಅಂಕಗಳಿಗೆ ಸುಮಾರು ೨೦ರ ಮೇಲೆ ಬಂದಿತ್ತು . ಎಲ್ಲ ಖುಶಿಯಾಗಿದ್ವಿ. "ಎಲ್ಲರಿಗೂ ಬ್ಲೂ ಬುಕ್ ಸಿಕ್ತ?" ಅಂತ ಮೇಷ್ಟ್ರು ಕೇಳಿದ್ರು. ಎಲ್ಲ ಒಕ್ಕೊರಲಿನಿಂದ "ಯಸ್ ಸರ್" ಅನ್ನಕ್ಕೂ ನನ್ನ ಒಬ್ಬ ಸಹಪಾಠಿ ಎದ್ದು ನಿಂತ. "ನನ್  ಬ್ಲೂ ಬುಕ್ ಸಿಕ್ಕಿಲ್ಲ ಸರ್" ಅಂದ.
ಅವರು ಮೇಜಿನ ಆ ಕಡೆ ಈ ಕಡೆ ನೋಡಿ, ತಮ್ಮ ಚೀಲದಿಂದ ಒಂದು ಪುಸ್ತಕ ತೆಗೆದು, "ಒಹ್ ಇದು ಇಲ್ಲೇ  ಉಳಿದುಬಿಟ್ಟಿದೆ, ತೊಗೊ" ಅಂದ್ರು.
ಅವನು ಪುಸ್ತಕ ಇಸ್ಕೊಂಡ ಮೇಲೆ, ಮೇಷ್ತ್ರು, "ಎಷ್ಟು ಬಂದಿದ್ಯಪ್ಪ?" ಕೇಳಿದ್ರು. ಇವನು, "೨೪ ಸರ್".
ಅದಕ್ಕೆ ಮೇಷ್ಟ್ರು, "ಶಹಬಾಷ್, ಚೆನ್ನಾಗಿ ತೆಗೆದಿದ್ಯಾ ಅಂಕಗಳನ್ನ" ಅಂದ್ರು.  ಅವನು ಸ್ವಲ್ಪ ಹಾಗೆ ಹೆಮ್ಮೆ ಇಂದ ಬೀಗ್ತಾ ಇದ್ದ. ಮೇಷ್ಟ್ರು, "ನೋಡಪ್ಪ, ಕಾಪಿ ಚೀಟಿ ಬ್ಲೂ ಬುಕ್ ಅಲ್ಲೇ ಬಿಟ್ಟುಬಿಟ್ಟಿದ್ಯ. ತೊಗೊ. ಮುಂದಿನ ಸಲದಿಂದ ಕಾಪಿ ಚೀಟಿ ಮರೀದೆ ಬ್ಲೂ ಬುಕ್ ಇಂದ ತೆಗೆದು ಬಿಡು" ಅಂದ್ರು ನೋಡಿ, ನಾವೆಲ್ಲಾ ಬಿದ್ದು ಬಿದ್ದು ನಕ್ಕಿದ್ದು. ಅವನು ಮಾತ್ರ ಬೆಪ್ಪನ ತರ ಪೆದ್ದು ಪೆದ್ದಾಗಿ ನಗ್ತಾ ನಿಂತಿದ್ದ. ಉದಾರತೆಗೆ ಇದಕ್ಕಿಂತ ಉದಾಹರಣೆ ಬೇಕಾ? 

Friday, December 14, 2018

ಕಾಲೇಜಲ್ಲಿ ragging

 ಕೆಲವು ನೆನಪುಗಳು ಸುಂದರ ಹಾಗು ಸುಮಧುರ. ಈ ಮಧುರ ನೆನಪುಗಳ ಒಂದು ಗೆರೆ ತಲೆಯಲ್ಲಿ ಮೂಡುತ್ತಿದ್ದಂತೆ ಮುಖದಲ್ಲಿ ಮಂದಹಾಸ ಸುಳಿಯುತ್ತೆ. ನನಗೆ ಈ ತರದ ಸುಮಧುರ ನೆನಪುಗಳಲ್ಲಿ, ಕಾಲೇಜಿನ  ನೆನಪುಗಳೇ ಹೆಚ್ಚು.

ನಾನು ಸಣ್ಣ ಊರುಗಳಲ್ಲಿ ಬೆಳೆದವಳು. ಆಗಿನ ಕಾಲದಲ್ಲಿ ತಂತ್ರಜ್ಞಾನ ಹಾಗು ಮಾಧ್ಯಮಗಳ ಗಲಾಟೆ ಅಷ್ಟಿರಲಿಲ್ಲ. ಹೀಗಾಗಿ, ಶಾಲೆ ಮತ್ತು ಶಾಲೆಯ ಗ್ರಂಥಾಲಯ, ದಿನಪತ್ರಿಕೆಗಳಷ್ಟೇ ನಮ್ಮ ಮಾಹಿತಿಯ  ಬಂಢಾರ ಆಗಿದ್ದವು. ವಯಸ್ಸಿಗೆ ತಕ್ಕ ಜ್ಞಾನ ಇದ್ದದ್ದು ಅಷ್ಟಕ್ಕಷ್ಟೇ. ಸುಮಾರು ವರ್ಷ  ಓದಿದ್ದು ಕನ್ನಡ ಮಾಧ್ಯಮ. ಇಂಜಿನೀರಿಂಗ್ ಗೆ ಬಂದರೂ, ಇಂಗ್ಲಿಷ್ನಲ್ಲಿ ಮಾತನಾಡುವ ವಿಶ್ವಾಸ ಮೂಡಿರಲಿಲ್ಲ. ಈ ತರದ ಇನ್ನು ಹಲವಾರು ಮಿತಿಗಳಿದ್ದರೂ, ಸಂತೋಷಕ್ಕೆ ಮತ್ತು ಧೈರ್ಯಕ್ಕೆ ಮಿತಿಯಿರಲಿಲ್ಲ. ಪ್ರತಿದಿನ ನವನವೀನವಾಗಿರ್ತಾ ಇತ್ತು.

ಇಲ್ಲಿ, ನನ್ನ ಕಾಲೇಜು ದಿನಗಳ ಕೆಲವು ಅನುಭವಗಳನ್ನ ನಿಮ್ಮೊಡನೆ ಹಂಚಿಕೊಳ್ಳಲು ಬಯಸುವೆ. ನಿಮಗೂ ಇಂತಹುದೇ ಅನುಭವಗಳಾಗಿದ್ದಿರಬಹುದು. ಓದಿ, ನಿಮ್ಮ ಅನಿಸಿಕೆ ತಿಳಿಸಿ.

ನಾನು ಇಂಜಿನಿಯರಿಂಗ್ ಮಾಡಿದ್ದು ಹಾಸನದ ಮಲೆನಾಡು ಕಾಲೇಜಿನಲ್ಲಿ. ನಮ್ಮಪ್ಪನಿಗೆ, ನನ್ನ ಸೇರಿಸಬೇಕಾದ ಕಾಲೇಜಿನ ಪೂರ್ವಾಪೇಕ್ಷಿತ (prerequisite) ಏನಪ್ಪಾ ಅಂದ್ರೆ, ಕಾಲೇಜಿನಲ್ಲಿ ಶಟಲ್ ಬ್ಯಾಡ್ಮಿಂಟನ್ ಕೋರ್ಟ್ ಇರಬೇಕು ಅಂತ!! ಮಲೆನಾಡು ಕಾಲೇಜು ಈ ಪರೀಕ್ಷೇಲಿ  ಪಾಸಾಗಿ, ನನ್ನ ಅಡ್ಮಿಶನ್ ಆಯಿತು.

ಊರು ಹೊಸದು, ಜನ ಹೊಸಬರು. ಒಂದುಕಡೆ ಉತ್ಸಾಹ ಇನ್ನೊಂದೆಡೆ ಹೆದರಿಕೆ. ಸೇರಿ ಒಂದು ವಾರಕ್ಕೆ ಕೆಲವರು ಸ್ನೇಹಿರತಾದರು. ಹೊಸ ಊರಲ್ಲಿ, ನಮಗೆ ನಮ್ಮವರು ತಮ್ಮವರು ಇಲ್ಲದ ಕಡೆ, ಸ್ನೇಹಿತರನ್ನು ಮಾಡಿಕೊಳ್ಳುವುದು ಸ್ವಲ್ಪ ಸುಲಭ. ಬೇರೆ ಆಯ್ಕೆ ಇರಲ್ಲವಲ್ಲ!

ನನ್ನ ಹೊಸ ಗೆಳೆಯ ಗೆಳತಿಯರೆಲ್ಲ ಭಯದಿಂದ "ragging" ಬಗ್ಗೆ ಮಾತಾಡುತ್ತಿದ್ದರು. ಹಿರಿಯ ಸಹಪಾಠಿಗಳು, ಹೊಸದಾಗಿ ಸೇರಿದ ಕಿರಿಯರಿಗೆ 'rag' ಮಾಡ್ತಾರಂತೆ. ಅವರು ಹೇಳಿದ ಹಾಗೆ ಕೇಳಬೇಕಂತೆ. ಇಲ್ಲ ಅಂದ್ರೆ ಶಿಕ್ಷೆ ಇರುತ್ತಂತೆ. ಅದರಲ್ಲೂ, ಕಾಲೇಜಿನ ವಿದ್ಯಾರ್ಥಿನಿಲಯದಲ್ಲಿ ಇರುವವರಿಗೆ ಭಯಂಕರವಾಗಿ 'rag' ಮಾಡ್ತಾರಂತೆ. ನಾನೋ, 'rag' ಅನ್ನೋ ಪದ ಕೇಳಿದ್ದೆ ಮೊದಲ ಸಲ. ನಾನು ಕುತೂಹಲದಿಂದ, 'ragging' ಅಂದ್ರೆ ಏನು ಮಾಡ್ತಾರೆ? ಯಾಕೆ ನೀವೆಲ್ಲ ಇಷ್ಟು ಹೆದರಿದೀರಾ ಅಂತ ವಿಚಾರಿಸಿದೆ. ಒಬ್ಬೊಬ್ಬರು ಒಂದೊಂದು ಹೇಳಿದರು. ಹಿರಿಯ ಸಹಪಾಠಿಗಳನ್ನು, 'sir', 'maam' ಅಂತ ಕರೆಯಬೇಕಂತೆ. ಅವರು ಸಿಕ್ಕ ತಕ್ಷಣ ಸಲ್ಯೂಟ್ ಹೊಡೆದು 'ಗುಡ್ ಮಾರ್ನಿಂಗ್ ' / 'ಗುಡ್ ಇವಿನಿಂಗ್' ಹೇಳಬೇಕಂತೆ ಅಂತ ಕೆಲವರು ಹೇಳಿದರು. ನಾನು, ಇದಕ್ಕೆ ಯಾಕೆ ಹೆದರಬೇಕು, ಸ್ವಲ್ಪ ದಿನ ಹೇಳಿದನ್ನು ಮಾಡಿ ಸ್ವಲ್ಪ ಮಜಾ ತೊಗೊಂಡರೆ ಆಯಿತು ಅನ್ಕೊಂಡೆ. ಇನ್ನು ಕೆಲವರು, ಹಿರಿಯರ ಕೊಠಡಿ ಸ್ವಚ್ಛ ಮಾಡಿ ಕೊಡಬೇಕಂತೆ, ಅಶ್ಲೀಲ ಪ್ರಶ್ನೆಗಳನ್ನ ಕೇಳ್ತಾರಂತೆ ಅಂತ ಹೇಳಿದ್ರು. ನಾನು ಇದೆಲ್ಲ ಕೇಳಿದ್ರೆ ಆಗಲ್ಲ, ಹೀಗೆ ಮುಂದುವರೆದರೆ ಉಪನ್ಯಾಸಕರಿಗೆ ನಿಮ್ಮ ಮೇಲೆ ದೂರು ಕೊಡಬೇಕಾಗತ್ತೆ ಅಂತ ಹೆದರಿಸೋಣ ಅಂತ ಮನಸ್ಸಲ್ಲೇ ನಿರ್ಧಾರ ಮಾಡಿದೆ. ಮಾಡಿ, ನನ್ನ ಸರದಿಗಾಗಿ ಕುತೂಹಲದಿಂದ ಕಾದೆ.

"ragging" ಇನ್ನೊಂದು ಪ್ರಮಾಣಿತ ಪ್ರೋಟೋಕಾಲ್ ಅಂದ್ರೆ, ಹಿರಿಯ ಸಹಪಾಠಿ ಹುಡುಗರು, ಕಿರಿಯ ಸಹಪಾಠಿ  ಹುಡುಗರಿಗೆ,ತಮಗೆ ಇಷ್ಟ ಆದ ಕಿರಿಯ ಸಹಪಾಠಿ ಹುಡುಗಿಯರ ಹೆಸರು, ವಿಳಾಸ, ಹುಟ್ಟಿದ ವರ್ಷ, ದಿನ ಹೀಗೆ ಇನ್ನು ಕೆಲವು ವಿವರಗಳನ್ನು ಕೇಳಿ ತರುವುದಕ್ಕೆ ಹೇಳುವುದು.

ಅಂತೂ ಇಂತೂ ನನ್ನ ಸರದಿ ಬೇಗನೆ ಬಂತು.

ಒಂದು ದಿನ ನನ್ನ ಸಹಪಾಠಿಯೊಬ್ಬ ಬಂದು "ನಿನ್ನಿಂದ ಒಂದು ಸಹಾಯ ಆಗಬೇಕು. ನನಗೆ ವಿದ್ಯಾರ್ಥಿ ನಿಲಯದಲ್ಲಿ, 'ragging' ಮಾಡ್ತಾ ಇದಾರೆ. ನಿನ್ನ ಕೆಲವು ವಿವರಗಳನ್ನು ತರಕ್ಕೆ ಹೇಳಿದರೆ. ದಯವಿಟ್ಟು ಈ ಎಲ್ಲ ವಿವರಗಳನ್ನು ಕೊಡು ಅಂತ" ಒಂದು ಲಿಸ್ಟ್ ಕೊಟ್ಟ. ನಾನು, ಇದ್ಯಾರಪ್ಪಾ, ನನ್ನ ವಿವರಗಳನ್ನು ಕೇಳೋವರು ಅಂತ ಕುತೂಹಲವಾಗಿ, "ಯಾರು ಈ ವಿವರಗಳನ್ನು ಕೇಳಿದ್ದು" ಅಂತ ಕೇಳಿದೆ. ಅದಕ್ಕೆ ಅವನು, " ಹೆಸರು ಹೇಳೋ ಹಾಗಿಲ್ಲವಂತೆ". ಅದಕ್ಕೆ ನಾನು, "ಹೆಸರು ಹೇಳದಿದ್ದರೆ, ವಿವರಗಳು ಸಿಗಲ್ಲ" ಅಂದೆ. ಕೊನೆಗೆ ಅವನು ಸೋತು ಹೆಸರನ್ನು ಹೇಳಿದ.

ಈ ಮಲೆನಾಡು ಕಾಲೇಜಲ್ಲಿ ನನ್ನ ಪ್ರೌಢ ಶಾಲೆಯಲ್ಲಿ ಓದಿದ ಒಬ್ಬ ಹಿರಿಯ ಸಹಪಾಠಿ ಇದ್ದ. ನಮ್ಮಿರದ್ದು ಸ್ವಲ್ಪ ಚರಿತ್ರೆ ಇತ್ತು. ಅವನು ನನಗೆ ಪ್ರೊಪೋಸ್ ಮಾಡಿ ನಾನು ಇಲ್ಲ ಅಂದು ಪ್ರೌಢ ಶಾಲೆಯಲ್ಲಿ ಮಾತು ಬಿಟ್ಟಿದ್ದೆವು. ಈ ಕಾಲೇಜಿನಲ್ಲಿ, ಅವನು ನಂಗೆ ಕಾಟ ಕೊಡಕ್ಕೆ ನಿರ್ಧರಿಸಿದ ಹಾಗಿತ್ತು. ಹಾಗಾಗಿ, ನನ್ನ ಹಳೆ ಹಿರಿಯ ಸಹಪಾಠಿ, ನನ್ನ ತರಗತಿಯಲ್ಲಿದ್ದ ಒಬ್ಬನಿಗೆ ನನ್ನ ಕೆಲವು ವಿವರಗಳನ್ನು(ಹೆಸರು, ಹುಟ್ಟಿದ ವರ್ಷ, ದಿನಾಂಕ, SSLC  ಮಾರ್ಕ್ಸ್ಇತ್ಯಾದಿ) ತರೋದಕ್ಕೆ ಹೇಳಿದ್ದಾನೆ. 

ನಾನು ನನ್ನ ಸಹಪಾಠಿಗೆ " ಈ ಲಿಸ್ಟ್ ಅಲ್ಲಿ ಇರೋ ಎಲ್ಲ ವಿವರಗಳು ಅವನಿಗೆ  ತಿಳಿದಿವೆ. ಹಾಗಾಗಿ ಮತ್ತೆ ಹೇಳೋ ಅವಶ್ಯಕತೆ ಇಲ್ಲ. ನಾ ಹೀಗೆ ಹೇಳಿದೆ ಅಂತ ಹೋಗಿ ಹೇಳು ಅಂದೆ"

ಮಾರನೆ ದಿನ ಮತ್ತೆ ಬಂದ. "ಈ ವಿವರಗಳನ್ನೆಲ್ಲ ಬರೆದು ಕೊಡಬೇಕಂತೆ, ಅಂತ ಚೀಟಿ ಕೊಟ್ಟ. ನೀವು ಇದಕ್ಕೆ ಉತ್ತರಿಸದಿದ್ರೆ ನಂಗೆ ಅವರು ಹಿಂಸೆ ಮಾಡ್ತಾರೆ" ಅಂದ.
ನಾನು "ಅವನಿಗೆ ಹೇಳು, ನಾನು ಹೆಸರು ಬದಲಿಸಿಲ್ಲ. ನನ್ನ ಹುಟ್ಟಿದ ದಿನಾಂಕ , SSLC ಮಾರ್ಕ್ಸ್ ಎಷ್ಟು ವರ್ಷ ಆದರು ಬದಲಾಗಲ್ಲ. ಇದಕ್ಕೂ ಮಿಗಿಲಾಗಿ ಇನ್ನೂ ಏನಾದ್ರು ಬೇರೆ ವಿವರ ಬೇಕಿದ್ರೆ, ನನ್ನ ನೇರವಾಗಿ ಕೇಳಬೇಕಂತೆ"

ನನ್ನ ಹಿರಿಯ ಸಹಪಾಠಿಗಳಿಗೆ ಯಾಕೋ ಸಾಕಾಗಿ, ಅಲ್ಲಿಗೆ ಈ ಘಟನೆಗೆ ಮುಕ್ತಾಯ ಹಾಡಿದರು.

ಈ ಘಟನೆ ನನಗೆ ನನ್ನ ಮೇಲೆ ಜಾಸ್ತಿ ವಿಶ್ವಾಸ ಮೂಡಿಸಿತು. 'ragging ' ಮಾಡಿಸ್ಕೊಳೋರು ಸಹ ಮಜಾ ತೊಗೋಬಹುದು ಅನ್ನಿಸಿತು.

ಒಂದು ದಿನ ತರಗತಿ ಮುಗಿಸಿ ನಾನು ನನ್ನ ಗೆಳತೀ ಸೈಕಲ್ ಸ್ಟಾಂಡ್ ಇಂದ ಸೈಕಲ್ ತಳ್ಳಿಕೊಂಡು ಮುಖ್ಯ ಗೇಟ್ ಕಡೆ ಬರ್ತಾ ಇದ್ವಿ. ಮೂರು ನಾಕು ಜನ ಹುಡುಗರು ನಮ್ಮ ಕಡೆ ಬಂದರು. ನನ್ನ ಗೆಳತೀ 'ಅನಿ, ಇವರು ನಮ್ಮನ್ನ 'rag' ಮಾಡಕ್ಕೆ ಬರ್ತಾ ಇದಾರೆ ಅನ್ನಿಸುತ್ತೆ' ಅಂತ ಅರ್ಧ ಅಳು ದನೀಲಿ ಹೇಳಿದಳು. ನಾನು, ಯಾಕೆ ಹೆದರ್ತೀಯ, ಕ್ಯಾಂಪಸ್ ಒಳಗೆ ಇದೀವಿ. ಏನ್ ಮಹಾ ಮಾಡಕ್ಕೆ ಆಗತ್ತೆ ಅವರಿಗೆ. ನೋಡೇ ಬಿಡೋಣ ಬಿಡು   ಅಂದೆ.

ಹುಡುಗರು ಬಂದರು. ನಮ್ಮಿಬ್ಬರ ಹೆಸರು, ಬ್ರಾಂಚ್ ಮತ್ತು ಊರು ಕೇಳಿದರು. ಹೇಳಿದ ನಂತರ ನನ್ನ ಗೆಳತಿಗೆ A B C D ಹೇಳು ಅಂದರು. ಅಷ್ಟಕ್ಕೇ ಅವಳು ಆಳಕ್ಕೆ ಶುರು ಮಾಡಿದಳು. ನಾನು ಬೇಗ ಹೇಳು ಮಾರಾಯಿತಿ, ಇದಕ್ಕೆ ಯಾಕೆ ಅಳ್ತಿ ಅಂದೆ. ಅಳ್ತಾನೆ A B C D ಮುಗ್ಸಿದ್ಲು.

ಮುಂದೆ ನನ್ನ ಸರದಿ. ನಾನು ತಯಾರಾಗಿದ್ದೆ.
ನನಗೆ A B C D ಹೇಳು ಅಂದ್ರು. ಕೆಲವೊಂದು ಸಲ ನನ್ನ ತಲೆ ಹಠಾತ್ ಆಗಿ ನನಗೆ ಗೊತ್ತಿಲ್ಲದ ಪ್ರತಿಕ್ರಿಯೆ ಕೊಟ್ಟಿಬಿಡತ್ತೆ. ಅವರು A B C D ಹೇಳು ಅಂದ ತಕ್ಷಣ, ನಾನು "'ಕ್ಯಾಪಿಟಲ್' ಓ , 'ಸ್ಮಾಲ್' ಓ? ಅಂದುಬಿಟ್ಟಿದ್ದೆ.  ನನ್ನ ಪ್ರಶ್ನೆಗೆ ನನಗೆ ನಗು. ನನ್ನ ಹಿರಿಯ ಸಹಪಾಠಿಗಳಿಗೆ ಆಶ್ಚರ್ಯ ಮತ್ತು ನಗು ಒಟ್ಟೊಟ್ಟಿಗೆ. "ಮೊದಲು 'ಕ್ಯಾಪಿಟಲ್' ಹೇಳು, ಆಮೇಲೆ 'ಸ್ಮಾಲ್'" ಅಂದ್ರು. ನಾನು ಉಚ್ಚ ಸ್ವರದಲ್ಲಿ 'ಕ್ಯಾಪಿಟಲ್' A B C D ಹೇಳಿ,   ಮೆಲುದನಿಯಲ್ಲಿ 'ಸ್ಮಾಲ್' A B C D ಹೇಳಿದೆ. ಅವರು ಸರಿ ಅಂತ ಹೊರಟರು. ನಾನು ಸುಮ್ಮನಿರಲಾಲಾರದೆ, "ಅ  ಆ ಇ ಈ " ಬೇಡವಾ?" ಅಂದೆ(ಅಲ್ಲೂ ಕನ್ನಡ ಪ್ರೇಮ!!). ಅವರು ಒಂದು ಸರ್ತಿ ನನ್ನ ಗುರಾಯಿಸಿದ್ರು. ನನ್ನ ಗೆಳತಿ, ನನ್ನ ಕೈ ಗಿಂಡತ ಇದ್ಲು, ಸುಮ್ನಿರೇ ಅಂತ. ಆಮೇಲೆ, ಅವರು, "  ಇವತ್ತಿಗೆ ಇಷ್ಟು ಸಾಕು" ಅಂದು ಹೊರಟರು.

ನನ್ನ ಗೆಳತಿ, ಅಳು ಮರೆತು ನಕ್ಕೋತ್ತಾ "ಅನಿ , ನೀ ಬರೀ ತರಲೆ ಕಣೇ ! " ಅಂತ ಸೈಕಲ್ ಏರಿ ಹೋದಳು.

ಕೆಲವೊಮ್ಮೆ ಗಂಭೀರ ಸನ್ನಿವೇಶಗಳಲ್ಲಿ ಹಾಸ್ಯ ಭಾವನೆಗಳನ್ನು ತಿಳಿ ಮಾಡಿ ನಮಗೆ ಬೇಕಾದ ಪ್ರತಿಕ್ರಿಯೆಯನ್ನು ಕೊಡಿಸುತ್ತೆ.


ಒಂದು ಪ್ರೇಮ ಕವಿತೆ

ನಾ ನಿನ್ನ  ಅರಸದೆ, ಬಯಸದೆ  ನೀ ನನ್ನ  ಅರಸದೆ, ಬಯಸದೆ  ವಿಧಿಯು ನಮ್ಮ  ಕೂಡಿಸಿರೆ ನಮ್ಮೀ ನಿತ್ಯ ಮಿಲನ  ಸುದೀರ್ಘ ಪಯಣ   ಹಾಕಿದೆ ಬುನಾದಿ  ನನ್ನ ಬದುಕಿಗೆ  ನನ್ನ ಮನದಲಿ...