Friday, June 22, 2018

ಹೆಸರಲ್ಲೇನಿದೆ?

ಬೆಂಗಳೂರಿನ ಬ್ಯುಸಿ ಬದುಕಿನಲಿ, ಹಾಸ್ಯ ಯಾಕೋ ಸೊರಗಿದೆ ಅನ್ನಿಸುತ್ತೆ. ಬಾಯ್ತುಂಬ ಮಾತಾಡೋರು, ಹೊಟ್ಟೆ ಹುಣ್ಣಾಗೋ ಹಾಗೆ ನಗುವವರೇ ಕಮ್ಮಿ ಆಗೋಗಿದ್ದಾರೆ. ಬರೀ ಸೋಶಿಯಲ್ ಮೀಡಿಯಾದಲ್ಲಿ ಮುಳುಗಿರೋರು, ಟ್ರಾಫಿಕ್ ಅಲ್ಲಿ ನಿಂತಿರೋರು, ಕಚೇರಿಗೆ ಓಡ್ತಿರೋರು, ಇವರುಗಳೇ ಜಾಸ್ತಿ ಕಾಣ್ತಾರೆ  ನಂಗೆ.

ಹೀಗಿರೋವಾಗ, ತುಂಬಾ ಒತ್ತಡ ಇರೋ ಐ ಟಿ ಬದುಕಲ್ಲಿ, ಕೆಲವೊಮ್ಮೆ ಸಿಕ್ಕಾಪಟ್ಟೆ ನಗು ಬರೋ ತರಹದ ಸಂದರ್ಭಗಳು  ಹುಟ್ಟುತ್ತವೆ, ಮರಳುಗಾಡಿನ ಓಯಸಿಸ್ ಥರ.

ನಾನು ಕೆಲಸಕ್ಕೆ ಸೇರಿದ ಹೊಸತು. ಆಂಗ್ಲ ಭಾಷೆಯನ್ನು ಇನ್ನೂ ಧೈರ್ಯವಾಗಿ ಮಾತಾಡುವ ಅಭ್ಯಾಸ ಆಗಿರಲಿಲ್ಲ. ನನ್ನನ್ನು ಯಾವುದೋ ಯೂರೋಪ್ ಗ್ರಾಹಕರ ಯೋಜನೆಗೆ (project) ಹಾಕಿದ್ದರು. ನನಗೆ ಮೊದಲೇ ಆಂಗ್ಲ ಭಾಷೆ ಉಪಯೋಗಿಸುವಾಗ, ಸರಿಯಾದ ಪದ ಬಳಕೆ ಮಾಡ್ತೀನ ಅನ್ನೋ ಅನುಮಾನ ಇತ್ತು ಆಗ.  ಹೀಗಿರೋವಾಗ, ದಿನಾ ಈ ಯೂರೋಪಿಯನ್ನರೊಡನೆ ಸ್ಕೈಪ್ ಅಲ್ಲಿ ಸಭೆ (ಮೀಟಿಂಗ್). ನನಗೋ, ಅವರ ಉಚ್ಚಾರಣೆ ಚೂರು ಅರ್ಥ ಆಗ್ತಾ ಇರಲಿಲ್ಲ. ಗುಡ್ ಮಾರ್ನಿಂಗ್ ಹೇಳಿ, ಅವರು ಕೇಳಿದ್ದಕ್ಕೆಲ್ಲ ಪೆಚ್ಚು ನಗೆ ನಕ್ಕು, ನನ್ನ ಸಹುದ್ಯೋಗಿಯ ಮುಖ ನೋಡ್ತಾ ಇದ್ದೆ. ಪಾಪ ಅವಳು, ಏನು ಹೇಳಿದ್ರು ಅಂತ ವಿವರಿಸೋಳು.

ಆ ಕಡೆ ತುಂಬಾ ಜನ ಸಭೆ ಸೇರಿದಾಗ, "ಹಾಯ್ ಆಲ್ , ಹಾಯ್ ಎವೆರಿಒನ್" ಅಂದುಬಿಡ್ತಾ ಇದ್ವಿ. ಒಬ್ಬೊಬ್ಬರೇ ಕರೆಗೆ ಬಂದಾಗ ಹೆಸರು ಕರೆಯಬೇಕಿತ್ತು. ತಂಡದ ಸಭೆ ಇದ್ದಾಗ ಗುಂಪಲ್ಲಿ ಗೋವಿಂದ ಅಂತ ಹೇಗೋ ನಡೀತಿತ್ತು.

ಒಮ್ಮೆ, ನಾನು ಒಬ್ಬಳೇ ಒಬ್ಬ ಯುರೋಪಿಯನ್ ಗ್ರಾಹಕನ ಜೊತೆ ಕರೆಗೆ ಹೋಗೋ ಸಂಧರ್ಭ ಬಂತು. ಅವನ ಹೆಸರು Ionut ಅಂತ. ಅಷ್ಟು ದಿನ ಅವನ ಹೆಸರನ್ನು ಹೇಗೆ ಉಚ್ಚರಿಸಬೇಕೆಂಬ ಯೋಚನೆಯನ್ನೇ ಮಾಡಿರಲಿಲ್ಲ ನಾನು. ಒಬ್ಬಳೇ ಕರೆಗೆ ಹೋಗಬೇಕಲ್ಲ ಅನ್ನೋ ಆತಂಕ ಒಂದೆಡೆ. ಇವನ ಹೆಸರನ್ನು ತಪ್ಪು ಉಚ್ಚರಿಸಿದರೆ ಕಷ್ಟ ಅನ್ನಿಸಿ, ನನ್ನ ಹಿರಿಯ ಸಹುದ್ಯೋಗಿ ಒಬ್ಬಳ ಹತ್ತಿರ ಹೋದೆ. ಸಂಕೋಚದಿಂದ, "ನೋಡಿ, ನನಗೆ ಒಬ್ಬ ಗ್ರಾಹಕನ ಜೊತೆ ಕರೆ ಇದೆ. ಅವರ ಹೆಸರು ಹೇಗೆ ಉಚ್ಚರಿಸಬೇಕು ತಿಳಿಯುತ್ತಿಲ್ಲ".  ಅವಳು, ನಗುತ್ತಲೇ, "ಯಾರೊಡನೆ ಕರೆ ಇದೆ ನಿಮಗೆ" ಎಂದಳು.
ನಾನು "'ಯು ನಟ್' ಅಂತ" ಅಂದಿದ್ದೆ ತಡ ಅವಳು ಜೋರಾಗಿ ನಗತೊಡಗಿದಳು. ನನಗೆ ಅವಳು ಯಾಕೆ  ಹಾಗೆ ನಗ್ತಾ ಇದ್ದಾಳೆ ಎಂದು ಅರ್ಥ ಆಗ್ಲಿಲ್ಲ. ಕರೆಗೆ ತಡ ಬೇರೆ ಆಗ್ತಾ ಇತ್ತು.
ಆಕೆ ನಗುವುದ ನಿಲ್ಲಿಸಿ " ಅವನ ಹೆಸರು ಯೋನಟ್" ಎಂದಳು. ಕರೆ ಮುಗಿಸಿ ಬಂದು, ಗೂಗಲ್ ಮಾಡಿ ನೋಡಿದೆ.  "ಯು ನಟ್" ಅಂದ್ರೆ ಏನು ಅಂತ. ಅರ್ಥ ನೋಡಿ  ಭಯ, ನಗು ಎರಡೂ ಒಟ್ಟಿಗೆ ಆಯಿತು. "ನಿಂಗೆ ಐಲು" ಅನ್ನೋ ಥರ ಅರ್ಥ ಅದು. ಸದ್ಯ, ನನ್ನ ಸಹುದ್ಯೋಗಿಯನ್ನು ಕೇಳಿದ್ದು ಒಳ್ಳೆದಾಯಿತು ಅಂದುಕೊಂಡೆ. ಮುಂದೆ, ಆ ಗ್ರಾಹಕ ಇರೋ ಊರಿಗೆ ಹೋದಾಗ, ಅವನನ್ನು ಕೇಳಿದೆ, "ನಿನ್ನ ಹೆಸರನ್ನು ಹೇಗೆ ಉಚ್ಚರಿಸಬೇಕು?" ಅಂತ. ಅದಕ್ಕವನು, "ಯೂನು " ಅಂದ.

ನಮ್ಮ ಕಥೆ ಹೀಗೆ ಆದರೆ, ಈ ಗ್ರಾಹಕ ಕಥೆ ಇನ್ನೊಂದು ಥರ. ನಮ್ಮ ತಂಡದಲ್ಲಿ, ಒಬ್ಬಳು "ಶ್ರದ್ಧಾ" ಅಂತ ಇದ್ದಳು. ನಾವು ಎಷ್ಟು  ಸರಿಪಡಿಸಿ ಹೇಳಿಕೊಟ್ಟರೂ ನಮ್ಮ ಗ್ರಾಹಕರೆಲ್ಲರೂ, ಅವಳನ್ನು "ಶ್ರಾದ್ಧಾ" ಎಂದೇ ಕರೆಯುತ್ತಿದ್ದರು. ನಮಗೆಲ್ಲ ತುಂಬಾ ನಗು. ಅವಳಿಗೋ,  ಗ್ರಾಹಕರ ಮೇಲೆ ಮತ್ತು ಅವರ ತಂದೆ ತಾಯಿಯ ಮೇಲೆ ಸಿಟ್ಟು ಬರ್ತಿತ್ತು.

ಇನ್ನೊಬ್ಬ ಸಹುದ್ಯೋಗಿಯ ಹೆಸರು "ಶ್ರವಂತ್ ." ಈ  ಒತ್ತು ಅಕ್ಷರದ ಉಚ್ಛಾರ  ಅವರಿಗೆ ಬಲು ಕಷ್ಟ. ನಾವು ಪದೇ ಪದೇ ಹೇಳಿ ಕೊಟ್ಟೆವು. ಕೊನೆಗೆ ಒಬ್ಬನಂತೂ  ಮೂರು ನಾಲ್ಕು ಸಲ ಅಭ್ಯಾಸ ಮಾಡಿ ತನಗೆ ಉಚ್ಚರಿಸಲು ಅನುಕೂಲವಾದ  "ಸರ್ವೆಂಟ್" ಅಂತ ಹೇಳಿ, "this is easy " ಅಂದ. ನಮ್ಮ ಶ್ರವಂತನ ಮುಖ ಸಿಟ್ಟಿನಿಂದ ಕೆಂಪಗೆ ಆಗಿತ್ತು. ನಾನು ಮಧ್ಯ ಬಾಯಿ ಹಾಕಿ, "ಶ್ರವಂತನ ಕೊನೆಯ ಹೆಸರು ಸುಲಭ. ಇನ್ನು ಮೇಲೆ ಇವನನ್ನು "ರೆಡ್ಡಿ" ಎಂದು ಕರೆಯೋಣ ಎಂದೆ. ಎಲ್ಲರೂ ಕೊನೆಗೆ ಒಪ್ಪಿದರು.

ಹೀಗೆ ಒಂದು ಸಲ, ನಮ್ಮ ಡೈರೆಕ್ಟರ್ ಸಭೆ ಕರೆದರು. ಅಮೇರಿಕಾದಿಂದ "ಕ್ರಿಸ್ , ಶಾಂಕ್ಸ್  ಹಾಗು ಪ್ಯಾಡಿ " ಬರ್ತಾರೆ. ಅದಕ್ಕೆ ಕೆಲವೊಂದು   ವರದಿ ಪಟ್ಟಿ ತಯಾರಿಸಬೇಕು ಎಂದರು. ನಾನು, ಜೀವನದಲ್ಲಿ ಅದುವರೆಗೂ ಬೇರೆ ದೇಶದವರನ್ನು ನೋಡಿರಲಿಲ್ಲ. ನಾನು ತುಂಬಾ ಉತ್ಸುಕಳಾಗಿ, ಈ ತ್ರಿಮೂರ್ತಿಗಳ  ಬರವಿಗಾಗಿ ಕಾದೆ.
ನಮ್ಮನ್ನೆಲ್ಲ "All Hands Meet " ಅನ್ನೋ  ಸಭೆಗೆ ಕರೆದರು. ನಾನು ಹೋಗಿ ಮುಂದಿನ ಸಾಲಿನಲ್ಲೇ ಕುಳಿತೆ. ಒಂದಷ್ಟು ಜನ ಸೂಟು  ಬೂಟು ಹಾಕಿದ ಭಾರತೀಯರು ಬಂದರು. ನಾನು ಬೇರೆಯವರು ಬರುತ್ತಾರೆ ಎಂದು ಬಾಗಿಲ ಕಡೆ ನೋಡುತ್ತಿದಾಗಲೇ ಸಭೆ ಶುರುವಾಯಿತು. ಸೂಟುಧಾರಿಗಳು ತಮ್ಮನ್ನ "ಕ್ರಿಸ್, ಶಾಂಕ್ಸ್ ಮತ್ತು ಪ್ಯಾಡಿ" ಆಗಿ ಪರಿಚಯ ಮಾಡಿಕೊಂಡರು. ನನಗೆ ಅವರು ಏನು ಹೇಳುತ್ತಿದ್ದಾರೆ ಅಂತ ಕೇಳಿಸಿಕೊಳ್ಳುವ ಬದಲು, ಇವರು ಯಾಕೆ ಪರಕೀಯರ ತರ ಹೆಸರು ಇಟ್ಕೊಂಡಿದಾರೆ ಅನ್ನೋದೇ ತಲೇಲಿ ಓಡ್ತಾ ಇತ್ತು. ಯಾರನ್ನಾದ್ರೂ ಕೇಳಕ್ಕೆ ನಾಚಿಕೆ. ಅವರುಗಳು ವಾಪಸ್ಸು ಅಮೆರಿಕೆಗೆ ಹೊರಡುವ ಮುನ್ನ "ವಂದನೆಗಳ ಈಮೇಲ್" ಕಳಿಸಿದಾಗ ತಿಳೀತು, ಇವರು ಕೃಷ್ಣಮೂರ್ತಿ, ಶಂಕರ ನಾರಾಯಣ ಮತ್ತು ಪದ್ಮನಾಭ ಅಂತ. ಬಹುಷಃ, ಅವರಿಗೂ ನಮ್ಮ ಶ್ರವಂತನ ಗತಿ ಬಂತಿತ್ತೇನೋ, ಅದಕ್ಕೆ ಇವರುಗಳು, ತಮ್ಮ ಹೆಸರನ್ನು ಅಭಾಸ ಆಗದ ಹಾಗೆ ಬಾಲಾಯಿಸಿಕೊಂಡಿರಬೇಕು.

ಪರ ಭಾಷೆ ಸಂಸ್ಕೃತಿ ಜನಗಳು ಒಟ್ಟಿಗೆ ಇದ್ದಾಗ ಈ ತರಹದ ಆಭಾಸಗಳು ಸ್ವಾಭಾವಿಕ. ಆದರೆ ಒಂದೇ ಭಾಷೆ ಇದ್ದೂ ಹ್ರಸ್ವ ಮಹಾ ಪ್ರಾಣಗಳ ತಪ್ಪು ಬಳಕೆಗಳಿಂದ ಆಭಾಸಗಳು ಆಗಿವೆ.

ಕೆಲವರು  'ಆ' ಕಾರ ಮತ್ತು  'ಹ' ಕಾರದ ಉಚ್ಚಾರಣೆ  ತಪ್ಪಾಗಿ ಕಲ್ತಿರ್ತಾರೆ. ಆ ತರದವರೊಬ್ಬರು ನಮ್ಮ ತಂಡಕ್ಕೆ ಸೇರಿದರು. ನನ್ನನ್ನು "ಹನೀತಾ" ಎನ್ನುತ್ತಿದ್ದರು. ನಾನು ಎಷ್ಟು ಸರಿ ಮಾಡಿದರು, ಮತ್ತೆ ಹನೀತಾ ಅನ್ನುತ್ತಿದ್ದರು. ನಾನು ನಾಯಿ ಬಾಲ ಡೊಂಕು ಎಂದು ಸುಮ್ಮನಾಗಿದ್ದೆ. ನಮ್ಮ ತಂಡಕ್ಕೆ ಒಬ್ಬ "ಆಜಮ್" ಎಂಬ  ಹೆಸರಿನ ಹುಡುಗ ಸೇರಿದ. ಹೊಸ ಹುಡುಗನನ್ನು ಬಹು ಆದರದಿಂದ ನಮ್ಮ ಹ ಕಾರದ ಸಹುದ್ಯೋಗಿ, "ಹಜಾಮ್"  "ಹಜಾಮ್" ಅಂತ ಕರೆಯಕ್ಕೆ ಶುರು ಮಾಡಿದ. ನಮಗೆ ನಗು ಒಂದು ಕಡೆ. ಆ ಹುಡುಗನ ಪಾಡು ನೋಡಕ್ಕೆ ಆಗ್ತಾ ಇರ್ಲಿಲ್ಲ. ಕೊನೆಗೆ ಆ ಹುಡುಗ, ನಮ್ಮ ತಂಡ ಬಿಟ್ಟು ಬೇರೆ ತಂಡಕ್ಕೆ ಸೇರಿದ, ದಿನಾ ಹಜಾಮ ಅನ್ನಿಸ್ಕೊಳೋದನ್ನ ತಪ್ಪಿಸ್ಕೊಳಕ್ಕೆ.

ಒಂದು ಸಮಯದಲ್ಲಿ ನಾನು ಎರಡು ಯೋಜನೆಗಳನ್ನು ನಿಭಾಯಿಸ್ತಾ ಇದ್ದೆ. ಒಂದು ಗ್ರಾಹಕಿಯ ಹೆಸರು 'ಚೆಮು' ಹಾಗು ಇನ್ನೊಂದು ಗ್ರಾಹಕಿಯ ಹೆಸರು 'ಎಮಿಲಿ'. ಇಬ್ಬರ ಜೊತೆಯೂ ಒಬ್ಬರಾದ ಮೇಲೆ ಒಬ್ಬರ ಜೊತೆ ದಿನವೂ ಕರೆಯಲ್ಲಿ ಮಾತಾಡುತ್ತಿದ್ದೆ. ಮೊದಲು 'ಚೆಮು' ಜೊತೆ ಕರೆ ಇರ್ತಿತ್ತು. ನನಗೋ, ಎಲ್ಲರ ಹೆಸರನ್ನು ಪದೇ ಪದೇ ಕರೆಯೋ ಅಭ್ಯಾಸ. ಹಿಂದಿನ ಕರೆಯಲ್ಲಿ  "ಯಸ್ ಚೆಮು, ನೋ ಚೆಮು, ಒಕೆ  ಚೆಮು" ಅಂತ ಹೇಳಿಕೊಂಡು ಎಮಿಲಿಯ ಕರೆಗೆ ಬಂದೆ. ಏನೋ ಗಡಿಬಿಡಿಯಲ್ಲಿ, ಕರೆ ಶುರುವಾದ ತಕ್ಷಣ, "ಹಾಯ್ ಚಮೇಲಿ, ಗುಡ್ ಮಾರ್ನಿಂಗ್" ಅಂದು ಬಿಟ್ಟೆ.
ಈ ಕಡೆ ನನ್ನ ತಂಡದವರು ಕರೆಯನ್ನು ಮ್ಯೂಟ್ ಗೆ ಹಾಕಿ, ಬಿದ್ದು ಬಿದ್ದು ನಗ್ತಾ ಇದ್ದಾರೆ. ನನಗೂ ನಗು. ಸದ್ಯ, ಎಮಿಲಿಗೆ ನಮ್ಮ ಭಾರತೀಯ ಭಾಷೆಗಳು ಬರದೇ ಇದ್ದಿದ್ದರಿಂದ ನನ್ನ ಕೆಲಸು ಉಳೀತು ಅಷ್ಟೇ!
ಹಿಂದೆ ಮಕ್ಕಳಿಗೆ ನಾಮಕರಣ ಮಾಡೋವಾಗ, ಜಾತಕದ ಪ್ರಕಾರ ಬಂದ ಅಕ್ಷರದಿಂದಲೋ ಅಥವಾ ಮನೆಯಲ್ಲಿ ಹಿರಿಯರ ಹೆಸರೋ, ದೇವರ ಹೆಸರೋ ಇಡ್ತಾ ಇದ್ರು. ಈಗ, ಮುಂದೆ ಮಗು ದೊಡ್ಡದಾಗಿ ಯಾವ ದೇಶದಲ್ಲಿ/ದೇಶದವರಿಗೆ ಕೆಲಸ ಮಾಡುತ್ತೋ, ಅವರಿಗೆ ಕರೆಯಲು ಸುಲಭವಾಗುತ್ತೋ ಅನ್ನೋದು ಯೋಚನೆ ಮಾಡೋ ಪರಿಸ್ಥಿತಿ ಬಂದಿದೆ.

ಕಾಲಾಯ ತಸ್ಮೈ ನಮಃ !







Thursday, June 14, 2018

ಯಜಮಾನ ಯಾರು?

ಕೆಲವು ವರ್ಷಗಳ ಹಿಂದೆ, ಒಂದು ಸಂಸ್ಥೆ(ಕಂಪನಿ)ಯಲ್ಲಿ ಕೆಲಸ ಮಾಡುತ್ತಿದ್ದಾಗ ನಡೆದ ಘಟನೆ. ಅಲ್ಲಿ, ನಮ್ಮದು ಒಂದು ದೊಡ್ಡ ತಂಡ. ಸುಮಾರು ಮುನ್ನೂರು ಜನದ ತಂಡ ಒಂದು ಗ್ರಾಹಕ (ಕ್ಲೈಂಟ್) ನಿಗೆ ಕೆಲಸ ಮಾಡ್ತಾ ಇದ್ವಿ. ತಂಡ ಅಂತ ಇದ್ದ ಮೇಲೆ ನಾಯಕ ಇರಲೇಬೇಕಲ್ಲವೇ! ನಮ್ಮ ಪೂರ್ತಿ ತಂಡದ ಉನ್ನತ ನಾಯಕತ್ವವನ್ನು ಒಬ್ಬರು ಕನ್ನಡದವರು ವಹಿಸಿದ್ದರು. ಅವರ ಪದನಾಮ (ಡೆಸಿಗ್ನೇಷನ್) ಅಕೌಂಟ್ ಡೈರೆಕ್ಟರ್ ಆಗಿತ್ತು. ಈ ಸ್ಥಾನ ತುಂಬಾ ಪ್ರಬಲ (ಪವರ್ಫುಲ್) ಹಾಗು ಪ್ರಭಾವಶಾಲಿ (influential) ಆಗಿತ್ತು. ಇವರ ತೀರ್ಮಾನವೇ ಅಂತ್ಯ.

ಮನುಷ್ಯ ಅಂದ ಮೇಲೆ ಅವರದೇ ಆದ ಬಲಾಬಲಗಳು (strengths & weakness) ಇರುತ್ತವೆ. ನಮ್ಮ ಡೈರೆಕ್ಟರ್ ಅವರು ನೇರ (straightforward ) ಹಾಗು ದಿಟ್ಟ (daring ). ತುಂಬಾ ಜನರಿಗೆ ಇದು ಇಷ್ಟ ಆಗ್ತಾ ಇರಲಿಲ್ಲ. ಮಾತಿನಲ್ಲಿ ತುಂಬಾ ಚಾಣಾಕ್ಷರಿದ್ದರು. ವಾದಗಳಲ್ಲಿ ಇವರನ್ನು ಗೆಲ್ಲುವುದಕ್ಕೆ  ಆಗುತ್ತಿರಲಿಲ್ಲ. ತಮ್ಮ ವಾಕ್ಚಾತುರ್ಯದಿಂದ ಎಲ್ಲರನ್ನು ಸೋಲಿಸಿ ತಮಗೆ ಏನು ಸರಿ ಅನ್ನಿಸುತ್ತೋ ಅದನ್ನು, ಇಲ್ಲ ತಮಗೆ ಹೇಗೆ ಬೇಕೋ ಹಾಗೆ ಕೆಲಸವನ್ನು ಹಾಗು ತಂಡವನ್ನು ಮುನ್ನಡೆಸುತ್ತಿದ್ದರು. ತಮಗೆ ಇಷ್ಟ ಇಲ್ಲದವರ ತಪ್ಪುಗಳನ್ನು ಎತ್ತಿ, ಅವರ ಕೆಲಸಕ್ಕೆ ಅಡ್ಡಿ ಅಡಚಣೆಗಳನ್ನು ಮಾಡುವುದರಲ್ಲೂ ಇವರು ನಿಸ್ಸೀಮರಾಗಿದ್ದರು. ಹಾಗೆ, ತಮ್ಮ ಕೆಳಗಿದ್ದವರನ್ನು ಬೇರೆ ಪಾಲುದಾರರಿಂದ (stakeholders ) ಆಗುವ ಮಾತಿನ ದಾಳಿಗಳಿಂದ ರಕ್ಷಿಸುತ್ತಿದ್ದರು. ಕೆಲವರಿಗೆ ಇವರೆಂದರೆ ಭಯ. ಎಲ್ಲಿ ಯಾವಾಗ ತೊಂದರೆ ಒಡ್ಡುತ್ತಾರೋ ಎಂದು. ಕೆಲವರು, ಇವರಿಗೆ ಹೇಗೆ ಬೇಕೋ ಹಾಗೆ ನಡೆದುಕೊಂಡು, ತೊಂದರೆಗಳನ್ನು ಬರದಂತೆ ನಿಭಾಯಿಸುತ್ತಿದ್ದರು. ಒಟ್ಟಿನಲ್ಲಿ ಇವರ ಪ್ರಾಬಲ್ಯ ಹೆಚ್ಚಿತ್ತು. ಇವರಿಗೆ ಬೇಕಾದಂತೆ ಬೇರೆಯವರು ನಡೆಯಬೇಕಿತ್ತು.

ಸಾಂಧರ್ಭಿಕವಾಗಿ ನಮ್ಮ ಡೈರೆಕ್ಟರ್ ಹಾಗು ನಾನು ಮತ್ತು ಕೆಲ ಕನ್ನಡಿಗರು ಇವರೊಡನೆ ವಯುಕ್ತಿಕ ಮಾತುಕಥೆಗಳಾಡುತ್ತಿದ್ದೆವು. ಕನ್ನಡದವರು ಕಮ್ಮಿ ಇದ್ದಕಾರಣ, ನಾವು ಕನ್ನಡದ ಒಂದು ಸಣ್ಣ ಗುಂಪು ಮಾಡಿ ಕೊಂಡು ಕನ್ನಡ ಸಾಹಿತ್ಯ ಸಿನೆಮಾ ಈ ತರದ ಮಾತುಕತೆಗಳು ನಡೆಯುತ್ತಿದ್ದವು.

ಕಾರ್ಪೊರೇಟ್ ಜಗತ್ತಲ್ಲಿ, 'lonely up the ladder ' ಅಂತ ಒಂದು ಹೇಳಿಕೆ ಇದೆ. ಅಂದರೆ, ಕಾರ್ಪೊರೇಟ್ ಜಗತ್ತಲ್ಲಿ ಉನ್ನತ ಸ್ಥಾನಕ್ಕೆ ಹೋಗುತ್ತಾ ಹೋಗುತ್ತಾ ಒಬ್ಬಂಟಿ ಆಗ್ತಾನೆ ಮನುಷ್ಯ ಅಂತ. ಹಾಗೆ, ನಮ್ಮ ಡೈರೆಕ್ಟರ್ ಗೂ ಕೂಡ ಕಚೇರಿಯಲ್ಲೂ ಸ್ನೇಹಿತರು ಅಂತ ಇರಲಿಲ್ಲ. ಅವರ ಸ್ಥಾನಕ್ಕೆ ಅವರು ಎಲ್ಲರೊಡನೆ ಸೀದಾ ಸಾದಾ ಮಾತಾಡಕ್ಕೆ ಆಗ್ತಿರಲಿಲ್ಲ. ಅವರಿಗೆ ಕನ್ನಡ ಪುಸ್ತಕ ಓದೋ ಹವ್ಯಾಸ ತುಂಬಾ ಇದ್ದ ಕಾರಣ ನಾನು ಹಾಗು ನನ್ನ ಸ್ನೇಹಿತರೊಬ್ಬರು ಸ್ವಲ್ಪ ಆತ್ಮೀಯವಾಗಿದ್ದೆವು. ಹೀಗೆ ಮಾತಾಡೋ ಕೆಲವು ದಿನಗಳಲ್ಲಿ ಹೀಗೊಂದು ಕಥೆ ಹೊರಗೆ ಬಂತು.

ಆ ದಿನ ನಾವು ಹೆಣ್ಣು ಗಂಡು ಸಮಾನತೆಯ ವಿಷಯಮಾತಾಡುತ್ತಿದ್ದೆವು. ನಮ್ಮ ಡೈರೆಕ್ಟರ್ ಅವರು ತಮ್ಮ ಒಂದು ಅನುಭವವನ್ನು ಸಂಕೋಚವಾಗೇ ಹಂಚಿಕೊಂಡರು.

ಅವರು ತಮ್ಮ ಐದನೇ ತರಗತಿಯಲ್ಲಿ ಓದುತ್ತಿರುವ ಮಗನಿಗೆ 'ಮೆಸೊಪಟಾಮಿಯಾ ನಾಗರೀಕತೆ'ಯ ಬಗ್ಗೆ ವಿವರಿಸುತ್ತಿದ್ದರಂತೆ. ಏಷ್ಯಾ ಖಂಡದಲ್ಲಿ ಈ ನಾಗರೀಕತೆ ೧೫೦ ಕ್ರಿಸ್ತ ಪೂರ್ವ ಇತ್ತು. ವ್ಯವಸಾಯ ಮತ್ತು ಗಣಿತ ಇಲ್ಲಿಂದಲೇ ಪ್ರಾರಂಭವಾಯಿತು. 'ತಂದೆಯೇ ಮನೆಯ ಯಜಮಾನ' (ಫಾದರ್ ಐಸ್ ದಿ ಹೆಡ್ ಆ ದಿ ಫ್ಯಾಮಿಲಿ ). ಹೀಗೆ ಕೆಲವು ಪಾಯಿಂಟ್ಸ್ ಹೇಳಿದ್ದಾರೆ. ಹೇಳಿ ಮುಗಿಸಿದ ಮೇಲೆ, ಮಗ ಮುಸಿಮುಸಿ ನಕ್ಕಿದ್ದಾನೆ. ಇವರು ಪುಸ್ತಕದಿಂದ ತಲೆ ಎತ್ತಿ ನೋಡಿದ್ದಾರೆ. ಮಗನ ಮುಖದಲ್ಲಿ ಕೆಣಕುವ ಕಿರು ನಗೆ. "ಯಾಕೋ ಮಗ, ನಗ್ತಾ ಇದ್ದೀಯ. ಇದ್ರಲ್ಲಿ ನಗೋ ಅಂತಾದ್ದು ಏನಿದೆ?" ಅಂದಿದ್ದಾರೆ. ಮಗ, "ಅಪ್ಪ, ಮೆಸೊಪಟಾಮಿಯಾ ನಾಗರೀಕತೆ ನಮ್ಮನೇಲಿ ಇಲ್ಲ ಅಲ್ವ ಅಪ್ಪ. ಇಲ್ಲಿ ಅಮ್ಮನೇ ಅಲ್ವ ಮನೆ ಯಜಮಾನಿ!" ಇವರಿಗೆ ಒಂದೆಡೆ ನಗು, ಇನ್ನೊಂದೆಡೆ ಐದನೇ ತರಗತಿಯಲ್ಲಿರೋ ಮಗ ಅದೆಷ್ಟು ಮನೆಯ ವ್ಯವಹಾರ ಮಾತುಕಥೆಗಳನ್ನ ಗಮನಿಸಿದ್ದಾನೆ ಅನ್ನೋ ಆಶ್ಚರ್ಯ. ಮಗನ ನಗುವಿಗೆ ತಮ್ಮದೂ ನಗು ಸೇರಿಸಿ ಪಾಠವನ್ನು ಮುಗಿಸಿದ್ದಾರೆ.

ಇನ್ನೊಂದು ಸಂಧರ್ಭವನ್ನು ಹೇಳಿಕೊಂಡರು. ಅವರು, ಸಂಸಾರ ಸಮೇತ, ತಮ್ಮ ಅಣ್ಣನ ಮನೆಗೆ ಹಳ್ಳಿಗೆ ಹೋಗಿದ್ರಂತೆ. ಅಣ್ಣನ ಮನೆಯಲ್ಲಿ, ಹಿಂದೆ ಇದ್ದಂತೆ ಪುರುಷ ಪ್ರಧಾನ ವ್ಯವಸ್ಥೆ. ಹಾಗಾಗಿ, ಇವರ ಅಣ್ಣ ಹೇಳಿದ್ದೆ ಮಾತು, ನಡೆದದ್ದೇ ದಾರಿ.

ಮನೆ ಹೊರಗೆ ಕೆಲಸದವರು ಅಡಿಕೆ ಕೆಲಸ ಮಾಡ್ತಾ ಇದ್ದರಂತೆ. ನಮ್ಮ ಡೈರೆಕ್ಟರ್ ವರಾಂಡದಲ್ಲಿ ಕೂತು, ಕೆಲಸವನ್ನು ನೋಡುತ್ತಾ , ಒಳಗೆ ಆಡುತ್ತಿದ್ದ ಮಗನಿಗೆ "ದೊಡ್ಡಪ್ಪನ್ನ ಕರಿಯೋ: ಅಂದಿದಾರೆ
ಮಗ: "ಅಪ್ಪ ಅವರು ಮಲಗಿದ್ದಾರೆ"
ಡೈರೆಕ್ಟರ್: "ಎಬ್ಬಿಸು"
ಮಗ: "ಇಲ್ಲಪ್ಪ , ಬೈತಾರೆ ಎಬ್ಬಿಸಿದ್ರೆ, ನಾನು ಎಬ್ಬಿಸಲ್ಲ"
ಡೈರೆಕ್ಟರ್: "ದೊಡ್ಡಮ್ಮಂಗೆ ಹೇಳು, ಎಬ್ಬಿಸಕ್ಕೆ"
ಮಗ: "ಬೇಡಪ್ಪ.. "
ಡೈರೆಕ್ಟರ್: "ಯಾಕೋ?"
ಮಗ: "ಅಪ್ಪ ಇಲ್ಲಿ ನಮ್ಮನೆ ತರ ಅಲ್ಲ.. ಎಲ್ಲ ಉಲ್ಟಾ.. "
ಡೈರೆಕ್ಟರ್: "ಏನೋ ಹಂಗಂದ್ರೆ?"
ಮಗ: "ಎಲ್ಲಕ್ಕೂ ದೊಡ್ಡಪ್ಪ ದೊಡ್ಡಮ್ಮನ್ನ ಬೈತಾರಪ್ಪ"
ಕೆಲಸದವರೆಲ್ಲ ಕಿಸಕ್ಕನ್ನೆ ನಕ್ಕಿದ್ದಾರೆ.. ಇವರು, ಕೆಲಸದವರಿಗೆ ರೇಗಿ " ಗಮನ ಇಟ್ಟು ಸರೀಗೆ ಕೆಲಸ ಮಾಡಿರೋ " ಅಂದು ಎದ್ದು ಬಂದಿದ್ದಾರೆ.

ಎಷ್ಟೋ ವೇಳೆ ಮನುಷ್ಯ ತನ್ನ ವೃತ್ತ್ತಿಜಗತ್ತಿನಲ್ಲಿ ವಯುಕ್ತಿಕ ಬದುಕಿಗಿಂತ ತುಂಬಾ ಭಿನ್ನವಾಗಿ ಇರ್ತಾನೆ.  ಕೆಲವೊಮ್ಮೆ ಜನನ್ನ ನಾವು ಜಡ್ಜ್ ಮಾಡಿಬಿಡ್ತೇವೆ.

ನಮ್ಮ ಸಹುದ್ಯೋಗಿಗಳು, ನಮ್ಮ ಡೈರೆಕ್ಟರ್ ವಯುಕ್ತಿಕ ಬದುಕಿನ ಬಗ್ಗೆ ಊಹಿಸ್ಕೊತಾ ಇದ್ರು. ಇವರ ಜೊತೆ  ಇವರ ಹೆಂಡತಿ ಮಕ್ಕಳು ಹೇಗೆ ಬದುಕ್ತಾರಪ್ಪ ಅಂತ !

ದೀಪದ ಬುಡದಲ್ಲಿ ಯಾವಾಗ್ಲೂ ಕತ್ತಲೇನೆ ತಾನೇ?


Sunday, June 3, 2018

ಕಾಫೀ ವಿರಾಮ

ಐ ಟಿ ಕ್ಷೇತ್ರ ಆಗಲಿ, ನಾನ್ ಐ ಟಿ ಕ್ಷೇತ್ರ ಆಗಲಿ, ಎಲ್ಲ ಉದ್ಯೋಗಿಗಳಿಗೂ ಒಬ್ಬರು ಬಾಸ್ ಅಂತ ಇರ್ತಾರೆ. ಅವರನ್ನ ಮ್ಯಾನೇಜರ್/ ಲೀಡ್/ ಸೂಪರ್ವೈಸರ್ ಅಥವಾ ಡೈರೆಕ್ಟರ್ ಅಂತ ಏನೋ ಒಂದು ಕರೀತಾರೆ. ಬಾಸ್ ಕೆಳಗೆ ಸಾಮಾನ್ಯವಾಗಿ,  ಒಂದು ಅಥವಾ ಜಾಸ್ತಿ ತಂಡಗಳಿರುತ್ತವೆ. ಅದನ್ನ ಟೀಮ್ ಅನಂತ ಕರೀತೀವಿ. ಟೀಮ್ ಅಲ್ಲಿ ಕೆಲಸ ಮಾಡೋರೆಲ್ಲಾ ಆ ಟೀಮ್ ನ  ಟೀಮ್ ಮೆಂಬರ್ಸ್.

ಈ ಬಾಸ್ ಮತ್ತೆ ಟೀಮ್ ಮೆಂಬರ್ ಸಂಬಂಧ ಒಂದು ತರ ಅತ್ತೆ ಸೊಸೆ ಸಂಬಂಧ ಇದ್ದ ಹಾಗೆ. ಇಬ್ಬರೂ ಎಷ್ಟು ಒಳ್ಳೆಯವರಾಗಿದ್ದರೂ, ಅವರ ತಪ್ಪು ಇವರಿಗೆ, ಇವರ ತಪ್ಪು ಅವರಿಗೆ ಚೆನ್ನಾಗಿ ಗೋಚರಿಸುತ್ತೆ. ಕೆಲವರು ಎದುರಾ ಬದುರಾ ಜಗಳ ಮಾಡ್ಕೋತಿದ್ರೆ, ಇನ್ನು ಕೆಲವರು ಸೌಮ್ಯವಾಗಿ ಮುಸುಕಿನ ಗುದ್ದಾಟ ಆಡ್ತಾನೋ, ಅಥವಾ ಶೀಥಲ ಸಮರಾನೋ ಮಾಡ್ತಾ ಇರ್ತಾರೆ. ಎಲ್ಲೋ ಅಪರೂಪಕ್ಕೆ ಪರಸ್ಪರ ಚೆನ್ನಾಗಿರೋ ಮ್ಯಾನೇಜರ್ - ಉದ್ಯೋಗಿ ಸಂಬಂಧಗಳೂ ಇರುತ್ತವೆ.

ಸಾಮಾನ್ಯವಾಗಿ, ಟೀಮ್ ಮೆಂಬರ್ಸ್ ಮನಸ್ಥಿತಿ ಹೇಗಿರುತ್ತೆ ಅಂದ್ರೆ, ಬಾಸ್ ಯಾವಾಗಲೂ ನಮ್ಮ ತಪ್ಪು ಕಂಡು ಹಿಡಿಯುತ್ತಾರೆ. ತಪ್ಪು ಕಂಡು ಹಿಡಿದು, ಬೈತಾರೆ, ಇಲ್ಲ ಅಂದ್ರೆ ಮೌಲ್ಯಮಾಪನದಲ್ಲಿ (ಅಪ್ಪ್ರೈಸಲ್)  ಮತ್ತು ಸಂಬಳ ಪರಿಷ್ಕರಣೆಯಲ್ಲಿ (ಸ್ಯಾಲರಿ ರಿವಿಶನ್)  ಅಲ್ಲಿ ತೊಂದರೆ ಮಾಡ್ತಾರೆ ಅನ್ನೋ ಭಾವ. ಹೀಗಾಗಿ, ಈ ಟೀಮ್ ಮೆಂಬರ್ಗಳು, ಬಾಸ್ ಇಂದ ಆದಷ್ಟು ತಮ್ಮ ತಪ್ಪುಗಳನ್ನ ಮುಚ್ಚಿಡಕ್ಕೆ ನೋಡ್ತಾರೆ ಮತ್ತು ತಾವು ಮಾಡಿದ ಒಳ್ಳೆ ಕೆಲಸಗಳನ್ನು ಎತ್ತಿ ತೋರುವಂತೆ ನಡೆದುಕೊಳ್ತಾರೆ. ಎಲ್ಲರೂ ಹೀಗೆ ಅಂತಲ್ಲ.

ನನ್ನ ಹದಿಮೂರು ವರ್ಷದ ಅನುಭವದಲ್ಲಿ, ಸುಮಾರು ಮೂರು-ನಾಲ್ಕು ಕಂಪನಿ ಬದಲಾಯಿಸಿ ಆಗಿದೆ. ಕಂಪನಿ ಬದಲಾಯಿಸಕ್ಕೆ  ಕಾರಣಗಳು ಅನೇಕ. ನಾ ಕೆಲಸ ಮಾಡುತ್ತಿದ್ದ ಒಂದು ಕಂಪನಿಯಲ್ಲಿ ನಡೆದ ಘಟನೆ.

ದಿನಾ ಉದ್ಯೋಗಿಗಳು ತಮ್ಮದೇ ಗುಂಪು ಮಾಡಿಕೊಂಡು ಊಟ, ಕಾಫೀ/ ಟೀ ಅಂತ ಕೆಫೆಟೇರಿಯಾಗೋ ಅಥವಾ ಹತ್ತಿರದ ದರ್ಶಿನಿಗೋ(ದರ್ಶಿನಿ ಸೌಭಾಗ್ಯ ಇದ್ದಾರೆ)  ಹೋಗ್ತಾರೆ. ನಾವು ಕೂಡ ಹಾಗೆ, ೩-೪ ಜನ ಗುಂಪುಗೂಡಿ ಊಟ, ಕಾಫಿ ಟೀ ಗೆ ಹೋಗ್ತಿದ್ವಿ. ಒಂದು ಅವಧಿಯಲ್ಲಿ ನಮ್ಮ ಗುಂಪಿನಲ್ಲಿ ಯಾರಿಗೂ ತುಂಬಾ ಕೆಲಸ ಇರಲಿಲ್ಲ. ಪ್ರಾಜೆಕ್ಟ್ ಗೆ ನಿಯೋಜಿಇಸಿಲ್ಲದ ಕಾರಣ ಕಚೇರಿಯಲ್ಲಿ ತುಂಬಾ ಬಿಡುವು ಇರ್ತಾ ಇತ್ತು. ಎಷ್ಟು ಹೊತ್ತು ಯಾವುದಾದರೂ ಹೊಸ ವಿಷಯದ ಬಗ್ಗೆ ಓದುವುದು, ತರಬೇತಿ ಪಡೆಯುವುದು? ಹೀಗಾಗಿ, ನಾವು ಊಟದ ವಿರಾಮ, ಟೀ ಕಾಫಿ ವಿರಾಮ ಸ್ವಲ್ಪ ಉದ್ದ ಆಗಿತ್ತು. ಬೆಳಗ್ಗೆ ಸುಮಾರು ಹನ್ನೊಂದಕ್ಕೆ ಕಾಫಿ ಗೆ ಹತ್ತಿರದ ದರ್ಶಿನಿ ಗೆ ಹೋಗೋದು, ಮಧ್ಯಾಹ್ನ ಊಟದ ನಂತರ ಲಘುವಾಗಿ ವಾಕಿಂಗ್ ಹೋಗೋದು, ಮತ್ತೆ ಸಂಜೆ ೪ಕ್ಕೆ ಕಾಫಿ, ಹೀಗೆ ಕಚೇರಿ ಜೀವನ ಆರಾಮಾಗಿ ನಡೆದಿತ್ತು ಸ್ವಲ್ಪ ದಿನ. 

ಈ ತರ ನಾವು ಆರಾಮವಾಗಿ ಸುತ್ತಾಡಕ್ಕೆ ಪ್ರಾರಂಭಿಸಿದ ಮೇಲೆ, ದಿನಾ ನಾವು ಹೊರಗೆ ಹೋಗೋವಾಗ ಇಲ್ಲ ಬರೋವಾಗ ನಮ್ಮ ಬಾಸ್ ದಾರಿಯಲ್ಲೋ, ದರ್ಶಿನಿಯಲ್ಲೋ ಸಿಗಬೇಕೇ?
ನಾವು ಮೊದಮೊದಲು ಗುಡ್ ಮಾರ್ನಿಂಗ್/ಗುಡ್ ಇವಿನಿಂಗ್ ಹೇಳಿ, ಅವರೂ ಕಾಫೀ ಗ ಅಂತೆಲ್ಲ ಕೇಳಿ ಹೋಗೋರು. ದಿನಕ್ಕೆ ಅವರು ಮೂರು ಮೂರು ಸರ್ತಿ ಹೊರಗಡೆ ಭೇಟಿ ಆಗಕ್ಕೆ ಶುರು ಆದಾಗ, ನನ್ನ ಸಹುದ್ಯೋಗಿಗಳಿಗೆ ಅಳುಕು ಕಾಡಕ್ಕೆ ಶುರು ಆಯಿತು. ಅವರೆಲ್ಲ, "ಬಾಸ್ ಸಿಕ್ರೆ ಏನು ಅನ್ಕೋತಾರೆ, ನಾವು ಬರೀ ಹೊರಗೆ ಸುತ್ತುತಾ ಇದೀವಿ ಅನ್ಕೋತಾರೆ. ಕೆಲಸ ಮಾಡ್ತಿಲ್ಲ ಅಂದುಕೊಳಲ್ವ" ಅಂತ ಒಬ್ಬರೆಂದರೆ, ಇನ್ನೊಬ್ಬರು, "ಕೆಲಸ ಇಲ್ಲ ಅಂತ ಅವರಿಗೆ ಗೊತ್ತಿದೆ ಅಲ್ವ, ಯಾಕೆ ಭಯ". ಆದರೂ ಕೆಲವರಿಗೆ ಮನಸ್ಸು ಬರದೇ, ಸಮಯ ಬದಲಾಯಿಸೋಣ ಅಂದುಕೊಂಡು ಸಾಮಾನ್ಯ ಸಮಯಕ್ಕಿಂದ ಅರ್ಧ ಗಂಟೆ ಹಿಂದೆ ಮುಂದೆ  ಮಾಡ್ಕೊಂಡ್ವಿ. ನಮ್ಮ ದುರಾದೃಷ್ಟಕ್ಕೆ  ಅದೂ ವರ್ಕ್ ಆಗಲಿಲ್ಲ. ಕಾರಣಾಂತರದಿಂದ, ನಮ್ಮ ಬಾಸ್ ಸಹ ಸಮಯ ಬದಲಾಯಿಸಿದ್ರೋ ಅಥವಾ ಅವರೂ ಹೊರಗಡೆ ತುಂಬಾ ಹೊತ್ತು (ಕೆಲಸ ಇಲ್ಲದೆ) ಸಮಯ ಕಳೀತಾ ಇದ್ರೋ,  ಮತ್ತೆ ನಾವು ದಾರಿಯಲ್ಲೋ, ದರ್ಶಿನಿಯಲ್ಲೋ ಒಬ್ಬರನ್ನೊಬ್ಬರು ಭೇಟಿ ಮಾಡ್ತಾ ಇದ್ವಿ. ನಾವು ದಾರಿ ಬದಲಾಯಿಸಿದ್ವಿ. ಅದು ಪ್ರಯೋಜನ ಅಗ್ಲಿಲ್ಲ. ನಮ್ಮ ಬಾಸ್ ಜೊತೆ ಹೋಗೋ ಬೇರೆ ಒಬ್ಬರು ಆ ದಾರೀಲಿ ಸಿಗ್ತಾ ಇದ್ರು.
ಎಲ್ಲರಿಗೂ, ಯಾಕೋ ಇದು ನಮ್ಮನ್ನ ತೊಂದರೆಗೆ  ಸಿಕ್ಕಿ ಹಾಕಿಸುತ್ತೆ ಅನ್ನೋ ಭಾವನೆ ಕಾಡಕ್ಕೆ ಶುರು ಆಯಿತು.
ಹೀಗೆ ಒಂದಿನ ನಾವೆಲ್ಲಾ ಮಾತಾಡಿಕೊಳ್ಳುತ್ತಾ ಕಾಫೀ ಕುಡಿದು, ಕಚೇರಿ ಮೆಟ್ಟಿಲು ಹತ್ತೋ ಸಮಯಕ್ಕೆ ನಮ್ಮ ಬಾಸ್ ಎದಿರಾದರು.
ನಾವೆಲ್ಲಾ, ಗುಡ್ ಮಾರ್ನಿಂಗ್ ಹೇಳಿದ್ವಿ. ನಮ್ಮ ಬಾಸ್, " ಏನ್ ಅನಿತಾ , ಕಾಫೀ ಆಯಿತಾ? " ಅಂದ್ರು.
ನಾನು, " ಹೂ ಸಾರ್. ನೀವು ಈಗ ಹೊರಟಿರ?" ಅಂದೆ. ಅವರು, " ಹೌದು ಅನಿತಾ.. ಮತ್ತೆ ಏನ್ ಈ ನಡುವೆ ಬರೀ ಕಚೇರಿ ಇಂದ ಹೊರಗೆ ಇರ್ತೀರಲ್ಲ ಯಾವಾಗ್ಲೂ?" ಅಂದ್ರು
ನಾನು ಪ್ರಯತ್ನಪೂರ್ವಕವಾಗಿ ಯೋಚನೆ ಮಾಡಿ ಉತ್ತರಿಸುವುದಕ್ಕೆ ಮೊದಲೇ, ನನ್ನ ಬಾಯಿ, " ಸಾರ್, ನೀವು ಯಾವಾಗಲೂ ಹೊರಗಡೆನೆ ಸಿಗ್ತಾ ಇದೀರಲ್ಲ!" ಅಂದು ಬಿಡೋದೇ!!

ಎಲ್ಲ ಹೆಹೆಹೆ ಅಂತ ನಕ್ಕರು. ನಾನು, ಮುಂದೆ ನಂಗೆ ಏನು ಕಾದಿದೆಯೋ ಅಂದುಕೊಳ್ಳುತ್ತ ಒಳಗೆ
ನಡೆದೆ.


ಐ ಟಿ ಲೋಕ

ನಮಸ್ಕಾರ!!
ಇದ್ದಕ್ಕಿಂದ್ದಂಗೆ ಇವತ್ತು ಹಳೆ ಚಾಳಿ ಉದ್ಭವ ಆಗಿದೆ. ನನ್ನ ಅನುಭವಗಳನ್ನು ನಿಮ್ಮ ಮುಂದೆ ಹಂಚಿಕೋಬೇಕು. ಹಂಚಿಕೊಂಡು, ನನ್ನ ಮನಸ್ಸು ಹಗುರ ಮಾಡಿಕೊಂಡು, ನಿಮ್ಮ ಮನಸ್ಸನ್ನೂ ಸ್ವಲ್ಪ ಹಗುರ ಮಾಡಿಸೋ ಬಯಕೆ. 

ನನ್ನ ಲೇಖಕ ಸ್ನೇಹಿತರಿಗೆ ಗೊತ್ತಿರುತ್ತೆ, ಬರೆಯಬೇಕು ಅನ್ನೋ ಹುಚ್ಚು ಹಂಬಲ ಯಾಕೆ ಬರತ್ತೆ ಅಂತ. ನನಗಂತೂ, ಬರೆಯಕ್ಕೆ ಸ್ಪೂರ್ತಿ ಬೇಕು. ಸ್ಪೂರ್ತಿ, ಪ್ರೀತಿ ಪ್ರೇಮ ಇರಬಹುದು, ರೋಷ ದ್ವೇಷ ಇರಬಹುದು. ಇಲ್ಲ ಜೀವನದ ಸವಾಲುಗಳು ಇರಬಹುದು, ಅದು ಲೇಖಕನ ಭಾವಕ್ಕೆ ತಕ್ಕಂತೆ. ಸದ್ಯಕ್ಕೆ ನನಗೆ ಸ್ಪೂರ್ತಿ, ಕಾರ್ಪೊರೇಟ್ ಲೋಕದ ಸವಾಲುಗಳು. 

ನಾನು ಒಬ್ಬ ಬಡಪಾಯಿ ಸಾಫ್ಟ್ವೇರ್ ಕೂಲಿ. ಬಡಪಾಯಿ ಯಾಕೆ, ಕೂಲಿ ಯಾಕೆ ಅಂತ ನನ್ನ ಮುಂದಿನ ಸರಣಿ ಲಲಿತ ಪ್ರಸಂಗಗಳಲ್ಲಿ ಹೇಳುವೆ. 

ಐ ಟಿ ಲೋಕದ ಜನರನ್ನು ಕಂಡರೆ, ನಾನ್ ಐ ಟಿ ಜನಕ್ಕೆ ಒಂದು ತರ ಬೆರಗು ಮತ್ತು  ಅಸೂಯೆ. ಇವರಿಗೇನಪ್ಪಾ, ಕಚೇರಿ ಒಳಗೆ ಕೆಲಸ, ದೊಡ್ಡ ಸಂಬಳ. ಆಗಾಗ ಬೇರೆ ದೇಶ ಸುತ್ತಾಡೋ ಅವಕಾಶ, ವರ್ಕ್ ಫ್ರಮ್ ಹೋಂ. ಇನ್ನೇನು ಬೇಕು ಜೀವನಕ್ಕೆ ಅನ್ನೋ ಭಾವನೆ. 
ಹೌದು, ಇದು ಎಲ್ಲ ನಿಜ. ಯಾವ ಕೆಲಸವೂ ಸುಲಭವಲ್ಲ. ಯಾವ ಕೆಲಸವೂ ಮೇಲಲ್ಲ, ಕೀಳಲ್ಲ. ಎಲ್ಲ ಕೆಲಸದಲ್ಲೂ ಅದರದೇ ಆದ ಪರ - ಅಪರಗಳು ಇರುತ್ತವೆ.  ಯಾವಾಗಲೂ ದೂರದ ಬೆಟ್ಟ ದುಂಡಗೆನೇ ಕಾಣೋದು. ಬನ್ನಿ.. ಹತ್ತಿರ ಹೋಗಿ, ನಿಧಾನವಾಗಿ ನನ್ನ ಕಣ್ಣೋಟದಿಂದ ಪರಿಚಯಿಸ್ತೀನಿ, ಕಷ್ಟನ ಹೇಗೆ ನಗುನಗುತ್ತಾ ಸ್ವೀಕರಿಸುತ್ತಾರೆ ಈ ಐ ಟಿ ಜನ ಅಂತ!  

ಕಾಯ್ತಾ ಇರಿ! ಸದ್ಯದಲ್ಲೇ ಐ ಟಿ ಕಾರ್ಪೊರೇಟ್ ಕಥೆಗಳನ್ನ ತರ್ತೀನಿ. 


ಒಂದು ಪ್ರೇಮ ಕವಿತೆ

ನಾ ನಿನ್ನ  ಅರಸದೆ, ಬಯಸದೆ  ನೀ ನನ್ನ  ಅರಸದೆ, ಬಯಸದೆ  ವಿಧಿಯು ನಮ್ಮ  ಕೂಡಿಸಿರೆ ನಮ್ಮೀ ನಿತ್ಯ ಮಿಲನ  ಸುದೀರ್ಘ ಪಯಣ   ಹಾಕಿದೆ ಬುನಾದಿ  ನನ್ನ ಬದುಕಿಗೆ  ನನ್ನ ಮನದಲಿ...